

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂರು ದಶಕಗಳಿಂದ ಶಿಕ್ಷಣ, ಕ್ರೀಡೆ, ಸಂಸ್ಕೃತಿ ಕ್ಷೇತ್ರಗಳಲ್ಲಿ ಅಭೂತಪೂರ್ವ ಸಾಧನೆ ಮಾಡಿದೆ. ಹೊಂಗಿರಣ ಪತ್ರಿಕೆ ಮೂಲಕ ಸಂಸ್ಥೆಯ ಸಾಧನೆ ಮತ್ತಷ್ಟು ಪ್ರಚಾರಗೊಳ್ಳಲಿ ಎಂದು ಉಜಿರೆಯ ಎಸ್‌ಡಿಎಂ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಹೇಳಿದರು.
ವಿದ್ಯಾಗಿರಿಯ ಸುಂದರಿ ಆನಂದ ಆಳ್ವ ಆವರಣದ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಗುರುವಾರ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸಿದ ಆಳ್ವಾಸ್ ಪದವಿಪೂರ್ವ ಕಾಲೇಜು ಹಾಗೂ ಶಾಲೆಗಳ ತ್ರೈಮಾಸಿಕ ಸಂಚಿಕೆ ಆಳ್ವಾಸ್ ಹೊಂಗಿರಣ ಬಿಡುಗಡೆಗೊಳಿಸಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ, ಪತ್ರಿಕೆಯ ಸಮೂಹ ಸಂಪಾದಕ ಡಾ.ಎಂ.ಮೋಹನ ಆಳ್ವ ಮಾತನಾಡಿ, ನನ್ನ ಬದುಕು ಜನಪದರ ದಾಖಲೆಗಳಿಲ್ಲದ ಮೌಖಿಕ ಚರಿತ್ರೆಯ ಹಾಗೆ ನಡೆದು ಬಂದಿದೆ. ಬದುಕಿನಲ್ಲಿ ಕೆಲಸದಷ್ಟೇ ದಾಖಲೆಗಳೂ ಮುಖ್ಯ. ಈ ನಿಟ್ಟಿನಲ್ಲಿ ಮೊದಲ ಬಾರಿಗೆ ಆಳ್ವಾಸ್ ಹೊಂಗಿರಣದ ಮೂಲಕ ನಮ್ಮ ಶಾಲೆಗಳ ಹಾಗೂ ಪದವಿಪೂರ್ವ ಕಾಲೇಜುಗಳ ಮಾಹಿತಿ ದಾಖಲಿಸುವ ಕಾರ್ಯಕ್ಕೆ ಹೆಜ್ಜೆ ಇಟ್ಟಿದ್ದೇವೆ. ಇದರ ಯಶಸ್ಸು ಪ್ರತಿಷ್ಠಾನದ ಕಾರ್ಯಗಳ ದಾಖಲೀಕರಣದವರೆಗೆ ಪಸರಿಸಲಿ ಎಂದು ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಆಳ್ವಾಸ್ ಕಾಲೇಜು(ಸ್ವಾಯತ್ತ) ಪ್ರಾಂಶುಪಾಲ ಡಾ.ಕುರಿಯನ್, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ.ಮೊಹಮ್ಮದ್ ಸದಾಕತ್, ಉಪಪ್ರಾಂಶುಪಾಲೆ ಪ್ರೊ.ಝಾನ್ಸಿ ಪಿ.ಎನ್. ಉಪಸ್ಥಿತರಿದ್ದರು. ಆಳ್ವಾಸ್ ಪ.ಪೂ ಕಾಲೇಜಿನ ಕಲಾ ವಿಭಾಗದ ಡೀನ್ ಕೆ.ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸ್ಥೆಗಳ ಪ್ರತಿ ಕಾರ್ಯವನ್ನು ದಾಖಲೀಕರಣ ಮಾಡುತ್ತಾರೆ. ಅದನ್ನು ಕಂಡು ನಾನು ಪ್ರೇರೇಪಿತನಾಗಿದ್ದೇನೆ. ಸಂಸ್ಥೆಯ ಮುಂದಿನ ಎಲ್ಲ ಕಾರ್ಯ ಚಟುವಟಿಕೆಗಳನ್ನು ದಾಖಲೆ ಮಾಡಲು ಪ್ರಯತ್ನಿಸುತ್ತಿದ್ದೇನೆ. - ಡಾ.ಎಂ.ಮೋಹನ ಆಳ್ವ, ಅಧ್ಯಕ್ಷರು, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ