

ಚೆನ್ನೈ: ಸಾಕಷ್ಟು ತಮಿಳು, ತೆಲುಗು ಸಿನಿಮಾಗಳಲ್ಲಿ ನಟಿಸಿ ಗ್ಲಾಮರ್ ಬೆಡಗಿಯಾಗಿ ಗುರುತಿಸಿಕೊಂಡಿರುವ ರೆಜಿನಾ ಕ್ಯಾಸಂಡ್ರಾ ಇದೀಗ ಕ್ರೀಡಾಲೋಕದಲ್ಲೂ ಹೆಸರು ಮಾಡಿದ್ದಾರೆ. ಸರ್ಫಿಂಗ್ ಕ್ರೀಡೆಯಲ್ಲಿ ಹವ್ಯಾಸಿಯಾಗಿ ತೊಡಿಗಿಸಿಕೊಂಡಿದ್ದ ರೆಜಿನಾ ಈಗ ಕ್ರೀಡಾಕೂಟವೊಂದರಲ್ಲಿ ಸ್ವರ್ಣ ಪದಕ ಜಯಿಸುವ ಮೂಲಕ ಗಮನಸೆಳೆದಿದ್ದಾರೆ.
ಚೆನ್ನೈನಲ್ಲಿ ಕಳೆದ ವಾರ ನಡೆದ ಸರ್ಫಿಂಗ್ ಸ್ಪರ್ಧೆಯ ಸ್ಟಾೃಂಡ್ಅಪ್ ಪ್ಯಾಡಲ್ ರೇಸ್ನಲ್ಲಿ ರೆಜಿನಾ ಪ್ರಥಮ ಸ್ಥಾನ ಪಡೆದಿದ್ದಾರೆ. ಸ್ಪರ್ಧೆಯಲ್ಲಿ ವಿಜೇತೆಯಾಗಿದ್ದಕ್ಕೆ ಟ್ರೋಫಿ ಮತ್ತು ಪ್ರಮಾಣಪತ್ರ ಪಡೆದುಕೊಳ್ಳುತ್ತಿರುವ ಚಿತ್ರಗಳನ್ನು 30 ವರ್ಷದ ರೆಜಿನಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸರ್ಫಿಂಗ್ ಕ್ರೀಡೆಯಲ್ಲಿ ಸ್ಪರ್ಧಾತ್ಮಕವಾಗಿ ಪಾಲ್ಗೊಂಡ ಮೊದಲ ಸ್ಪರ್ಧೆಯಲ್ಲೇ ಅವರು ಪದಕ ಸಾಧನೆ ಮಾಡಿರುವುದು ವಿಶೇಷವಾಗಿದೆ.
ಈ ಸ್ಪರ್ಧೆಯಲ್ಲಿ ಅಚಾನಕ್ ಆಗಿ ಪಾಲ್ಗೊಂಡಿರುವುದಾಗಿಯೂ ರೆಜಿನಾ ತಿಳಿಸಿದ್ದಾರೆ. ಮೂಲವೇಳಾಪಟ್ಟಿಯ ಪ್ರಕಾರ ಆ ದಿನ ಅವರು ಶೂಟಿಂಗ್ ಒಂದರಲ್ಲಿ ಪಾಲ್ಗೊಳ್ಳಬೇಕಾಗಿತ್ತು. ಆದರೆ ಆ ಸಿನಿಮಾದ ಶೂಟಿಂಗ್ ಮುಂದೂಡಲ್ಪಟ್ಟ ಹಿನ್ನೆಲೆಯಲ್ಲಿ ಚೆನ್ನೈನಲ್ಲೇ ಉಳಿದಕೊಂಡಿದ್ದ ಅವರು ಕಡೇ ಕ್ಷಣದಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಮುಂದಾಗಿದ್ದರು. ತಮ್ಮ ತಂಡದ ಜತೆಗೆ ರಿಲೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಯೋಜನೆ ಅವರದಾಗಿತ್ತು. ಆದರೆ ತಮ್ಮ ತಂಡದ ಪ್ರೇರಣೆಯಿಂದ ವೈಯಕ್ತಿಕ ಸ್ಪರ್ಧೆಯಲ್ಲೇ ಅವರು ಪಾಲ್ಗೊಂಡಿದ್ದರು.
ಕನ್ನಡದಲ್ಲೂ ‘ಸೂರ್ಯಕಾಂತಿ’ ಎಂಬ ಸಿನಿಮಾದಲ್ಲಿ ನಟಿಸಿರುವ ರೆಜಿನಾ ಅವರ ಇತ್ತೀಚೆಗಿನ ಸಿನಿಮಾ ತಮಿಳಿನ ‘ಚಕ್ರ’ ಆಗಿದೆ. ಬಾಲಿವುಡ್ನಲ್ಲೂ ಅವರು ಸಿನಿಮಾವೊಂದರಲ್ಲಿ ನಟಿಸಿದ್ದಾರೆ. ಸದ್ಯ ತಮಿಳು, ತೆಲುಗಿನಲ್ಲಿ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.