

ಮುಂಬೈ; ಆಮದು ಕಡಿಮೆ ಮಾಡುವುದು ಮತ್ತು ರಫ್ತು ಹೆಚ್ಚಿಸುವುದು ರಾಷ್ಟ್ರೀಯತೆಯ ಅತ್ಯಂತ ಮಹತ್ವದ ಸ್ವರೂಪ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಜ್ಞಾನ ಎಂಬುದು ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಅತ್ಯಂತ ಮುಖ್ಯವಾದ ವಿಷಯವಾಗಿದೆ. ಜಗತ್ತಿನಲ್ಲಿ ಪ್ರಗತಿ ಸಾಧಿಸುವ ಪ್ರತಿಯೊಂದು ದೇಶವೂ ಜ್ಞಾನ ಮತ್ತು ಸಂಶೋಧನೆಯಿಂದಾಗಿ ಮುಂದೆ ಬಂದಿದೆ. ಈ ಹಿನ್ನೆಲೆ ರಕ್ಷಣೆ, ಕೃಷಿ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬಹಳಷ್ಟು ಸಂಶೋಧನೆಗಳು ನಡೆಯುತ್ತಿವೆ ಎಂದು ಅವರು ಹೇಳಿದರು.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಗಡ್ಕರಿ, ಜ್ಞಾನ ಮತ್ತು ಸಂಶೋಧನೆಯಲ್ಲಿ ಮುಂದುವರಿಯುವ ದೇಶವು ವಿಶ್ವಗುರು ಆಗಿ ಹೊರಹೊಮ್ಮುತ್ತದೆ ಎಂದು ಹೇಳಿದರು. ಶಿಕ್ಷಣ ಮತ್ತು ನಾವೀನ್ಯತೆಗಳನ್ನು ರಾಷ್ಟ್ರೀಯ ಅಭಿವೃದ್ಧಿಯೊಂದಿಗೆ ಜೋಡಿಸುವ ಅಗತ್ಯವನ್ನು ಅವರು ಒತ್ತಿ ಹೇಳಿದರು.
(ಏಜೆನ್ಸೀಸ್)
ಹಿಂದೆ ಸೈನಿಕರು ಮತ್ತು ಶಸ್ತ್ರಾಸ್ತ್ರ ಟ್ಯಾಂಕ್‌ಗಳನ್ನು ಬಳಸಿ ಯುದ್ಧಗಳನ್ನು ನಡೆಸಲಾಗುತ್ತಿತ್ತು. ಈಗ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಲಾಗುತ್ತಿದೆ. ಇದು ಜ್ಞಾನ ಆಧಾರಿತ ತಂತ್ರಗಳ ಕಡೆಗೆ ಜಾಗತಿಕ ಚಲನಶೀಲತೆಯ ಬದಲಾವಣೆಯನ್ನು ಸೂಚಿಸುತ್ತದೆ ಎಂದರು. ಭಾರತವನ್ನು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಮತ್ತು ವಿಶ್ವದ ಮೂರನೇ ಅತಿದೊಡ್ಡ ರಾಷ್ಟ್ರವನ್ನಾಗಿ ಮಾಡುವ ಗುರಿಯನ್ನು ಪ್ರಧಾನಿ ನರೇಂದ್ರ ಮೋದಿ ಹೊಂದಿದ್ದಾರೆ ಎಂದು ಗಡ್ಕರಿ ತಿಳಿಸಿಕೊಟ್ಟರು. ಯುವಕರ ಭವಿಷ್ಯವು ದೇಶದ ಭವಿಷ್ಯಕ್ಕೆ ಸಂಬಂಧಿಸಿದೆ. ನಾವು ಆಮದುಗಳನ್ನು ಕಡಿಮೆ ಮಾಡುವುದು ಮತ್ತು ರಫ್ತುಗಳನ್ನು ಹೆಚ್ಚಿಸುವುದು ರಾಷ್ಟ್ರೀಯತೆಯ ದೊಡ್ಡ ರೂಪವಾಗಿದೆ ಎಂದು ಗಡ್ಕರಿ ಹೇಳಿದರು.