

ಕೊಲ್ಕತ : 6,800 ರೂ.ಗಳ ಸಾಲದ ಕಂತು ಪಾವತಿಸದಿದ್ದಕ್ಕೆ ಏಜೆಂಟರು ಬಂದು ಮನೆಯ ಮುಂದೆ ಕುಳಿತ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಶ್ಚಿಮ ಬಂಗಾಳದಿಂದ ವರದಿಯಾಗಿದೆ. ಪ್ಲಂಬರ್ ಕೆಲಸ ಮಾಡುತ್ತಿದ್ದ 40 ವರ್ಷ ವಯಸ್ಸಿನ ಸಾಧನ್ ಸಿನ್ಹ, ಮೃತ ದುರ್ದೈವಿ.
ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯ ಬಿಂದುಪರ ಗ್ರಾಮದ ನಿವಾಸಿ ಸಿನ್ಹ, ಪ್ಲಂಬಿಂಗ್ ಕೆಲಸದಿಂದ ತಿಂಗಳಿಗೆ 15,000 ದಿಂದ 20,000 ರೂಪಾಯಿ ಸಂಪಾದಿಸುತ್ತಿದ್ದರು. ಕೆಲಸಕ್ಕೆ ಅನುಕೂಲವಾಗಲಿ ಎಂದು ಜನವರಿಯಲ್ಲಿ ಖಾಸಗಿ ಹಣಕಾಸು ಕಂಪೆನಿಯಿಂದ 1 ಲಕ್ಷ ರೂಪಾಯಿ ಸಾಲ ಮಾಡಿ ದ್ವಿಚಕ್ರವಾಹನ ಖರೀದಿಸಿದ್ದರು. ಕರೊನಾ ಲಾಕ್ಡೌನಿನಿಂದಾಗಿ ಮೇ ಮತ್ತು ಜೂನ್ ತಿಂಗಳ 3,400 ರೂ. ಮಾಸಿಕ ಕಂತನ್ನು ಕಟ್ಟಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಜೂನ್ 22 ರಂದು ಬೆಳಿಗ್ಗೆ 9 ಗಂಟೆಗೆ ರಿಕವರಿ ಏಜೆಂಟರು ಮನೆಗೆ ಬಂದು ಬಾಕಿ ಹಣ ಕೇಳಿದರು. ಕೆಲವು ದಿನಗಳ ಸಮಯ ಕೊಟ್ಟರೆ ತೀರಿಸುವುದಾಗಿ ಹೇಳಿದರೂ ಕೇಳದೆ ಹಣ ಕೊಡುವವರೆಗೆ ಹೋಗುವುದಿಲ್ಲ ಎಂದು ಆಚೆಯೇ ಕೂತರು. ಈ ರೀತಿ ಸಾಲಗಾರರು ಮನೆಗೆ ಬಂದ ಬಗ್ಗೆ ಅವಮಾನಗೊಂಡ ಸಾಧನ್ ಸಿನ್ಹ ಕೊಠಡಿಯೊಳಗೆ ಹೋಗಿ ಬಾಗಿಲು ಹಾಕಿಕೊಂಡು ನೇಣು ಬಿಗಿದುಕೊಂಡಿದ್ದಾರೆ ಎಂದು ಮೃತರ ಪತ್ನಿ ಮಮೋನಿ ಪೊಲೀಸರಿಗೆ ತಿಳಿಸಿದ್ದಾರೆ. (ಏಜೆನ್ಸೀಸ್)