

ಶಿರ್ವ: ಪ್ರಾಥಮಿಕ ಹಂತದಲ್ಲಿಯೇ ವಿದ್ಯಾರ್ಥಿಗಳಲ್ಲಿರುವ ಸಾಮರ್ಥ್ಯ ಮತ್ತು ಪ್ರತಿಭೆ ಗುರುತಿಸಿ ಪ್ರೋತ್ಸಾಹ ನೀಡಲು ಇಂತಹ ಕಾರ್ಯಕ್ರಮ ಉಪಯುಕ್ತ, ವಿದ್ಯಾರ್ಥಿಗಳು ಭಾಗವಹಿಸಿ ಜ್ಞಾನ ವೃದ್ಧಿಸಿಕೊಳ್ಳಬೇಕು ಎಂದು ವಿಷ್ಣುಮೂರ್ತಿ ದೇವಸ್ಥಾನ ಅಧ್ಯಕ್ಷ ಎಸ್.ನಿತ್ಯಾನಂದ ಹೆಗ್ಡೆ ಹೇಳಿದರು.
ಶಿರ್ವ ವಿದ್ಯಾವರ್ಧಕ ಸಂಘ ಆಡಳಿಕ್ಕೊಳಪಟ್ಟ ಹಿಂದು ಪ್ರೌಢಶಾಲೆಯಲ್ಲಿ ಕನ್ನಡ ಮಾಧ್ಯಮ ಏಳನೇ ತರಗತಿ ವಿದ್ಯಾರ್ಥಿಗಳಿಗೆ ಕ್ಲಸ್ಟರ್ ಮಟ್ಟದ ಕಾರ್ಯಾಗಾರ ಜ್ಞಾನ ದೀವಿಗೆ ಶಾಲಾ ಸಭಾಂಗಣದಲ್ಲಿ ಸೋಮವಾರ ಉದ್ಘಾಟಿಸಿ ಮಾತನಾಡಿದರು.
ವಿದ್ಯಾವರ್ಧಕ ಸಂಘ ಆಡಳಿತಾಧಿಕಾರಿ ಪ್ರೊ.ವೈ.ಭಾಸ್ಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಶಿರ್ವ ಮತ್ತು ಸುತ್ತಮುತ್ತಲಿನ ಹತ್ತು ಕನ್ನಡ ಮಾಧ್ಯಮ ಶಾಲೆ ಶಿಕ್ಷಕ-ಶಿಕ್ಷಕಿಯರು ಮತ್ತು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಹಿಂದು ಪ.ಪೂ. ಕಾಲೇಜು ಪ್ರಾಂಶುಪಾಲ ಭಾಸ್ಕರ ಎ., ಹಳೇ ವಿದ್ಯಾರ್ಥಿ ಸಂಘ ಅಧ್ಯಕ್ಷ ರಮಾನಂದ ಶೆಟ್ಟಿಗಾರ್, ಪ್ರೌಢಶಾಲಾ ನಿವೃತ್ತ ಮುಖ್ಯ ಶಿಕ್ಷಕಿ ಶಕಿಲಾ ಶುಭಹಾರೈಸಿದರು. ಮುಖ್ಯ ಶಿಕ್ಷಕಿ ವಸಂತಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಸುರೇಂದ್ರನಾಥ ಶೆಟ್ಟಿ ವಂದಿಸಿ, ಶಿಕ್ಷಕಿ ಸುಪ್ರೀತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಾಚ್ಯ ವಸ್ತು ಪದರ್ಶನ, ಆಹಾರ ಮೇಳ, ವಿಜ್ಞಾನ ಮಾದರಿ ಪ್ರದರ್ಶನ, ಕರಕುಶಲ ವಸ್ತುಗಳ ತಯಾರಿ, ಸಂಗೀತ, ಕಸದಿಂದ ರಸ, ಕಿರುಚಿತ್ರ ಪ್ರದರ್ಶನ ಮತ್ತು ವಿವಿಧ ಕ್ರೀಡಾ ಸ್ಪರ್ಧೆ ಏರ್ಪಡಿಸಿ ವಿದ್ಯಾರ್ಥಿಗಳಿಗೆ ತರಬೇತಿ ಮತ್ತು ಮಾಹಿತಿ ನೀಡಲಾಯಿತು. ಕಿಶೋರ ಯಕ್ಷಗಾನದಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.