ಆಹಾರದ ರುಚಿ ಹೆಚ್ಚಿಸಲು 5 ನಿಮಿಷದಲ್ಲಿ ಮಾಡಿ ಟೊಮೆಟೊ ಉಪ್ಪಿನಕಾಯಿ; ಸಿಂಪಲ್​​ Recipe ಇಲ್ಲಿದೆ..

Untitled design - 2024-11-19T193721.141
Published on

ನಾವಿಲ್ಲಿ ಉಪ್ಪಿನಕಾಯಿ ಬಗ್ಗೆ ಮಾತನಾಡುತ್ತಿದ್ದೇವೆ. ನೀವು ಭಾರತದ ಪ್ರತಿಯೊಂದು ಮೂಲೆಯಲ್ಲಿಯೂ ವಿವಿಧ ರೀತಿಯ ಉಪ್ಪಿನಕಾಯಿಗಳನ್ನು ತಿನ್ನಬಹುದು. ಪ್ರತಿ ಭಾರತೀಯ ಮನೆಯಲ್ಲೂ ಉಪ್ಪಿನಕಾಯಿಯನ್ನು ವಿವಿಧ ಪದಾರ್ಥಗಳೊಂದಿಗೆ ತಯಾರಿಸಲಾಗುತ್ತದೆ. ಉಪ್ಪಿನಕಾಯಿ ಇಲ್ಲದೆ ಆಹಾರದ ರುಚಿ ಅಪೂರ್ಣವೆಂದು ತೋರುತ್ತದೆ. ಇಲ್ಲಿ ನಾವು ನಿಮ್ಮೊಂದಿಗೆ ಒಂದು ವಿಶಿಷ್ಟವಾದ ಉಪ್ಪಿನಕಾಯಿ ರೆಸಿಪಿಯನ್ನು(Recipe) ಹಂಚಿಕೊಳ್ಳುತ್ತಿದ್ದೇವೆ.

ಕಡಿಮೆ ಸಮಯದಲ್ಲಿ ತ್ವರಿತವಾಗಿ ಟೊಮೆಟೊದಿಂದ ತಯಾರಿಸಿದ ಉಪ್ಪಿನಕಾಯಿಯನ್ನು ಟೊಮೆಟೊ ಉಪ್ಪಿನಕಾಯಿ ಅಥವಾ ಟೊಮೆಟೊ ತೊಕ್ಕು ಎಂದು ಕರೆಯಲಾಗುತ್ತದೆ. ಇದನ್ನು ದಕ್ಷಿಣ ಭಾರತದಲ್ಲಿ ಗೊಜ್ಜು ಎಂದೂ ಕರೆಯುತ್ತಾರೆ. ಇದರ ರುಚಿ ನಿಮ್ಮ ಬಾಯಲ್ಲಿ ನೀರೂರುವಂತೆ ಮಾಡುತ್ತದೆ. ನಿಮಿಷಗಳಲ್ಲಿ ತಯಾರಿಸಬಹುದಾದ ಈ ರೆಸಿಪಿಯನ್ನು ಹಲವು ತಿಂಗಳುಗಳವರೆಗೆ ಸಂರಕ್ಷಿಸಿಡಬಹುದು, ಇದು ಬೇಗ ಹಾಳಾಗುವುದಿಲ್ಲ. ಹಾಗಾದರೆ ನೀವು ಮನೆಯಲ್ಲಿಯೇ ತ್ವರಿತವಾಗಿ ಟೊಮೆಟೊ ಉಪ್ಪಿನಕಾಯಿಯನ್ನು ಹೇಗೆ ತಯಾರಿಸಬಹುದು, ಹೀಗಿದೆ ವಿಧಾನ.

ಟೊಮೆಟೋ ಉಪ್ಪಿನಕಾಯಿ ತಯಾರಿಸಲು ಬೇಕಾಗುವ ಪದಾರ್ಥಗಳು

  • 2 ಟೊಮೆಟೊ
  • ಅಗತ್ಯವಿರುವಷ್ಟು ಚಿಲ್ಲಿ ಪೌಡರ್​​
  • ಸಾಸಿವೆ
  • ಜೀರಿಗೆ
  • ಮೆಂತ್ಯ ಕಾಳು
  • ಉಪ್ಪು
  • ಸಕ್ಕರೆ
  • ಅಡುಗೆ ಎಣ್ಣೆ

ಟೊಮೆಟೊ ಉಪ್ಪಿನಕಾಯಿ ಮಾಡುವ ವಿಧಾನ

ಮೊದಲಿಗೆ ಪ್ಯಾನ್​​ನಲ್ಲಿ ಮೆಂತ್ಯವನ್ನು ಫ್ರೈ ಮಾಡಿ. ಮೆಂತ್ಯ ತಣ್ಣಗಾದಾಗ ಅದಕ್ಕೆ ಸಾಸಿವೆ ಸೇರಿಸಿ ಈಗ ಅದೆರಡನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಬಳಿಕ ಇನ್ನೊಂದು ಪ್ಯಾನ್ ತೆಗೆದುಕೊಂಡು ಸ್ವಲ್ಪ ಅಡುಗೆ ಎಣ್ಣೆ ಹಾಕಿ. ಎಣ್ಣೆ ಬಿಸಿಯಾದ ಬಳಿಕ ಅದಕ್ಕೆ ಕತ್ತರಿಸಿದ ಟೊಮೆಟೊವನ್ನು ಸೇರಿಸಿ ಚೆನ್ನಾಗಿ ಬೇಯಿಸಿ. ನಂತರ ಸ್ವಲ್ಪ ಸಕ್ಕರೆ ಸೇರಿಸಿ ಅದು ಕರಗುವವರೆಗೂ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ರುಚಿಗೆ ತಕ್ಕಂತೆ ಉಪ್ಪು, ಸ್ವಲ್ಪ ಜೀರಿಗೆ ಸೇರಿಸಿ ಮಿಕ್ಸ್​ ಮಾಡಿ. ಈಗ ಇದಕ್ಕೆ ಪುಡಿ ಮಾಡಿಕೊಂಡಿರುವ ಸಾಸಿವೆ ಮತ್ತು ಮೆಂತ್ಯವನ್ನು ಸೇರಿಸಿ, ಚಿಲ್ಲಿ ಪೌಡರ್​​ ಅನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಫ್ರೈ ಮಾಡಿ. ಈಗ ನಿಮ್ಮ ಉಪ್ಪಿನಕಾಯಿ ಸವಿಯಲು ಸಿದ್ಧವಾಗಿದೆ. ಅದನ್ನು ಗಾಳಿಯಾಡದ ಬಿಗಿಯಾದ ಪಾತ್ರೆಯಲ್ಲಿ ಸಂಗ್ರಹಿಸಿ. ಈ ಟೊಮೆಟೊ ಉಪ್ಪಿನಕಾಯಿಯನ್ನು ಅನ್ನ, ಚಪಾತಿ, ದೊಸೆ ಜತೆ ಸವಿಯಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net