

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಚಿಂತಾಜನಕ ಸ್ಥಿತಿ ತಲುಪಿದಂತೆ, ಸನ್ನಿವೇಶವನ್ನು ತಿಳಿಯಾಗಿಸಲು ನಗರದಲ್ಲಿ ಎರಡು ದಿನಗಳ ಲಾಕ್ಡೌನ್ ವಿಧಿಸಬಹುದೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತ್ತು. ಈ ಬಗ್ಗೆ ಇಂದು(ನ.15) ಕೋರ್ಟ್ಗೆ ತನ್ನ ಪ್ರತಿಕ್ರಿಯೆ ಸಲ್ಲಿಸಿದ ದೆಹಲಿ ಸರ್ಕಾರ, ಅಕ್ಕಪಕ್ಕದ ರಾಜ್ಯಗಳ ವ್ಯಾಪ್ತಿಗೆ ಬರುವ ಇಡೀ ರಾಷ್ಟ್ರೀಯ ರಾಜಧಾನಿ ಪ್ರದೇಶ(ಎನ್ಸಿಆರ್)ಕ್ಕೆ ಕೇಂದ್ರ ಸರ್ಕಾರ ಅಥವಾ ಕಮಿಷನ್ ಫಾರ್ ಏರ್ ಕ್ವಾಲಿಟಿ ಮ್ಯಾನೇಜ್ಮೆಂಟ್ನವರು ನಿರ್ಬಂಧಗಳನ್ನು ವಿಧಿಸಿದಲ್ಲಿ, ದೆಹಲಿಯಲ್ಲೂ ಲಾಕ್ಡೌನ್ ತೆರನ ಕ್ರಮ ತೆಗೆದುಕೊಳ್ಳಲು ಸಿದ್ಧ ಎಂದು ಹೇಳಿದೆ.
ವಾಯು ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ತೆಗೆದುಕೊಳ್ಳಲಾದ ಕ್ರಮಗಳ ವಿವರ ನೀಡಿದ ದೆಹಲಿ ಸರ್ಕಾರ, ಮಹಾನಗರದ ಶಾಲೆಗಳಲ್ಲಿ ಭೌತಿಕ ತರಗತಿಗಳನ್ನು ಒಂದು ವಾರ ನಡೆಸುವುದಿಲ್ಲ. ಸರ್ಕಾರಿ ಅಧಿಕಾರಿಗಳು ವರ್ಕ್ ಫ್ರಂ ಹೋಂ ಮಾಡುತ್ತಿದ್ದು, ಖಾಸಗಿ ಕಛೇರಿಗಳಿಗೂ ವರ್ಕ್ ಫ್ರಂ ಹೋಂ ಮಾರ್ಗ ಅನುಸರಿಸಲು ಸಲಹೆ ನೀಡಲಾಗಿದೆ. ಎಲ್ಲಾ ನಿರ್ಮಾಣ ಕಾಮಗಾರಿಗಳನ್ನು 3 ದಿನಗಳ ಮಟ್ಟಿಗೆ ನಿಲ್ಲಿಸಲಾಗಿದೆ ಎಂದಿದೆ. "ಸ್ಥಳೀಯ ಮಾಲಿನ್ಯವನ್ನು ನಿಯಂತ್ರಿಸಲು ದೆಹಲಿಯಲ್ಲಿ ಲಾಕ್ಡೌನ್ ವಿಧಿಸಲು ಸಿದ್ಧವಿದ್ದೇವೆ. ಆದರೆ ದೆಹಲಿಯ ಚಿಕ್ಕ ಸರಹದ್ದಿನಲ್ಲಿ ಮಾತ್ರ ಲಾಕ್ಡೌನ್ ವಿಧಿಸುವುದರಿಂದ ಸೀಮಿತ ಪರಿಣಾಮವಾಗುತ್ತದೆ. ಅಕ್ಕಪಕ್ಕದ ಪ್ರದೇಶಗಳಲ್ಲಿ ಕೂಡ ಇದೇ ತೆರನ ಕ್ರಮ ವಹಿಬೇಕಾಗುವುದು" ಎಂದು ಅರವಿಂದ್ ಕೇಜ್ರಿವಾಲ್ ಸರ್ಕಾರ ಹೇಳಿದೆ.
ಜಗತ್ತಿನ ಅತ್ಯಂತ ಪ್ರದೂಷಿತ ನಗರವೆಂಬ ಕುಖ್ಯಾತಿ ಪಡೆದಿರುವ ದೆಹಲಿಯಲ್ಲಿ ಶುಕ್ರವಾರದಂದು ಏರ್ ಕ್ವಾಲಿಟಿ ಇಂಡೆಕ್ಸ್(ಏಕ್ಯೂಐ) 471 ರ ಅತಿರೇಕದ ಮಟ್ಟ ತಲುಪಿತ್ತು. ಶನಿವಾರದಂದು 437 ಕ್ಕೆ ತಲುಪಿದ್ದ ಏಕ್ಯೂಐ, ಭಾನುವಾರದಂದು ಸರಾಸರಿ 330ಕ್ಕೆ ಇಳಿದಿದೆ. ಇದಕ್ಕೆ ಹರಿಯಾಣ ಮತ್ತು ಪಂಜಾಬ್ನ ರೈತರು ಹೊಲಗಳಲ್ಲಿ ಬೆಂಕಿ ಹಾಕುವುದರಲ್ಲಿ ಉಂಟಾದ ಇಳಿಕೆಯೂ ಕಾರಣ ಎನ್ನಲಾಗಿದೆ. (ಏಜೆನ್ಸೀಸ್)