ರಾಜ್ಯದಲ್ಲಿ ಇಕೆವೈಸಿ ಪ್ರಕ್ರಿಯೆ ಮರು ಜಾರಿ: ಆಹಾರ ಇಲಾಖೆ ಸುತ್ತೋಲೆ

ba27fd88-56da-4f12-979d-bfcc8b5aefb5
Published on

ಬೆಂಗಳೂರು: ಬೋಗಸ್​ ಕಾರ್ಡ್​ ಪತ್ತೆಗೆ, ಪಡಿತರ ಸೋರಿಕೆ ತಡೆಗೆ ಮುಂದಾದ ಆಹಾರ ಇಲಾಖೆ,ರೇಷನ್​ ಕಾರ್ಡ್​ಗೆ ಆಧಾರ್​ ದೃಢೀಕರಣ(ಇ-ಕೆವೈಸಿ) ಜೋಡಣೆ ಪ್ರಕ್ರಿಯೆ ಮರು ಜಾರಿಗೊಳಿಸಿದೆ.

2019ರ ಜು.19ರಂದು ಪಡಿತರ ಕಾರ್ಡ್​ನ ಪ್ರತಿ ಸದಸ್ಯರು ಇಕೆವೈಸಿ ಮಾಡಿಸಿಕೊಳ್ಳಬೇಕು ಎಂದು ಇಲಾಖೆ ಸುತ್ತೋಲೆ ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಶೇ.75ರಷ್ಟು ಕಾರ್ಡ್​ದಾರರು ಇಕೆವೈಸಿ ಮಾಡಿಸಿಕೊಂಡಿದ್ದರು. ಇದೀಗ ಪಡಿತರ ಚೀಟಿ ಹೊಂದಿರುವ ಕುಟುಂಬಗಳು ಕಡ್ಡಾಯವಾಗಿ ಇಕೆವೈಸಿ ಮಾಡಿಸಬೇಕೆಂದು ಇಲಾಖೆ ಸುತ್ತೋಲೆ ಹೊರಡಿಸಿದೆ. ಹಾಗಾಗಿ, ಬಿಪಿಎಲ್​, ಅಂತ್ಯೋದಯ ಕಾರ್ಡ್​ ಹೊಂದಿರುವ ಪ್ರತಿ ಸದಸ್ಯರು ಸಮೀಪದ ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಇಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದರೆ ಕಾರ್ಡ್​ ರದ್ದಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಪ್ರಕ್ರಿಯೆ ಹೇಗೆ?

ರೇಷನ್​ ಕಾರ್ಡ್​ನಲ್ಲಿರುವ ಪ್ರತಿಯೊಬ್ಬರು ನ್ಯಾಯಬೆಲೆ ಅಂಗಡಿಗಳಿಗೆ ತೆರಳಿ ಆಧಾರ್​ ದೃಢೀಕರಣ ಮಾಡಿಸಬೇಕು. ಸರ್ಕಾರವು ಪ್ರತಿ ಫಲಾನುಭವಿ ದೃಢೀಕರಣಕ್ಕೆ 5 ರೂ ಮತ್ತು ಒಂದು ಕುಟುಂಬದಲ್ಲಿ ಎಷ್ಟೇ ಫಲಾನುಭವಿ ಇದ್ದರೂ ನೋಂದಾಣಿಗೆ ಗರಿಷ್ಟ 20 ರೂ.ನಂತೆ ನ್ಯಾಯಬೆಲೆ ಅಂಗಡಿಗಳಿಗೆ ಪಾವತಿಸಲಿದೆ. ವರ್ತಕರಿಗೆ ಇಲಾಖೆಯಿಂದ ನೀಡಿರುವ ಲಾಗಿನ್​ ಐಡಿಯಲ್ಲೇ ಇಕೆವೈಸಿ ಮಾಡಿಸತಕ್ಕದು. ಕಾರ್ಡ್​ ಸಂಖ್ಯೆ ನಮೂದಿಸಿದರೆ ಎಷ್ಟು ಸದಸ್ಯರು ಇದ್ದಾರೆ ಎಂಬುದರ ಬಗ್ಗೆ ಮಾಹಿತಿ ಸಿಗುತ್ತದೆ. ಬಳಿಕ, ಎಲ್ಲರೂ ಆಧಾರ್​ ದೃಢೀಕರಣ ಮಾಡಿಸಬೇಕು. ಫಲಾನುಭವಿ ಮೃತಪಟ್ಟಿರುವ ಮತ್ತು ಬೇರೆ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ದೃಢೀಕರಣ ವೇಳೆ ಲೆಕ್ಕ ಸಿಗಲಿದೆ.

ಇಕೆವೈಸಿ ಏಕೆ?

ಹಿಂದೊಮ್ಮೆ ಇಲಾಖೆಯಿಂದ ಬೋಗಸ್​ ಕಾರ್ಡ್​ ತಡೆಯುವ ಸಲುವಾಗಿ ರಾಜ್ಯಾದ್ಯಂತ ರೇಷನ್​ ಕಾರ್ಡ್​ ಪರಿಶೀಲನೆ ಕಾರ್ಯ ನಡೆದಿತ್ತು. ನಂತರ, ರೇಷನ್​ ಕಾರ್ಡ್​ಗೆ ಆಧಾರ್​ ಜೋಡಣೆ ನಿಯಮ ತರಲಾಗಿತ್ತು. ಶೇ.100 ಆಧಾರ್​ ಜೋಡಣೆಯಾಗಿತ್ತು. ಈ ವೇಳೆ ಲಾಂತರ ಬೋಗಸ್​ ಕಾರ್ಡ್​ ಪತ್ತೆಯಾಗಿತ್ತು. 2019ರಿಂದ 2022ರವರೆಗೆ ನಡೆದ ಇಕೆವೈಸಿ ಪ್ರಕ್ರಿಯೆಯಲ್ಲೂ ಸತ್ತವರ ಹೆಸರಿನಲ್ಲಿ ರೋಷನ್​ ಪಡೆಯುತ್ತಿರುವುದು ಬಹಿರಂಗವಾಗಿತ್ತು. ರಾಷ್ಟ್ರೀಯ ಆಹಾರ ಸುರಕ್ಷತೆ ಕಾಯ್ದೆ (ಎನ್​ಎ್​ಎಸ್​ಎ) ಹಾಗೂ ಸುಪ್ರೀಂ ಕೋರ್ಟ್​ ಆದೇಶದನ್ವಯ ಪಡಿತರ ಕಾರ್ಡ್​ನ ಪ್ರತಿಯೊಬ್ಬರು ಇಕೆವೈಸಿ ಮಾಡಿಸಿಕೊಳ್ಳಬೇಕೆಂಬ ನಿಯಮವಿದೆ. ಆದ್ದರಿಂದ, ಎಲ್ಲ ಕಾರ್ಡ್​ದಾರರು ಇಕೆವೈಸಿ ಮಾಡಿಸಿಕೊಂಡರೆ ನಕಲಿ ಕಾರ್ಡ್​ಗೆ ಪತ್ತೆಯಾಗುವುದಲ್ಲದೆ ಪಡಿತರ ಸೋರಿಕೆ ತಡೆಗಟ್ಟಬಹುದು. ಜತೆಗೆ, ಕಾರ್ಡ್​ನಲ್ಲಿ ಮೃತ ಸದಸ್ಯರ ಹೆಸರನ್ನು ಡಿಲೀಟ್​ ಮಾಡುವುದಕ್ಕೆ ಅನುಕೂಲವಾಗಲಿದೆ.

ಮುರ್ನಾಲ್ಕು ವರ್ಷದ ಹಿಂದೆ ಇಕೆವೈಸಿ ಮಾಡಿದ್ದಕ್ಕಾಗಿ ನೀಡಬೇಕಿದ್ದ ಹಣವನ್ನು ಆಹಾರ ಇಲಾಖೆ ಬಾಕಿ ಉಳಿಸಿಕೊಂಡಿದೆ. ಸಾಕಷ್ಟು ಬಾರಿ ಮನವಿ ಪತ್ರ ಕೊಟ್ಟರೂ ಈವರೆಗೆ ಇಕೆವೈಸಿ ಹಣ ಬಿಡುಗಡೆ ಮಾಡಿಲ್ಲ. ಇದೀಗ ರೇಷನ್​ ಕಾರ್ಡ್​ಗೆ ಆಧಾರ್​ ದೃಢೀಕರಣ ಮಾಡುವಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದಕ್ಕೆ ನಮ್ಮ ವಿರೋಧವಿದೆ. ಸಂಪೂರ್ಣವಾಗಿ ಬಾಕಿ ಹಣ ಬಿಡುಗಡೆ ಮಾಡಬೇಕು ಮತ್ತು ಸರ್ವರ್​ ಸಮಸ್ಯೆ ಬಗೆಹರಿಸಿದರೆ ಮಾತ್ರವೇ ಇಕೆವೈಸಿ ಮಾಡಲಾಗುವುದು.

|ಟಿ.ಕೃಷ್ಣಪ್ಪ. ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘದ ಅಧ್ಯಕ್ಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net