ಆರ್​ಸಿಬಿ ವಿಜಯೋತ್ಸವ ಮೆರವಣಿಗೆ: ಸಿಎಂ ಸನ್ಮಾನ ಸೇರಿದಂತೆ ಏನೆಲ್ಲ ನಡೆಯಲಿದೆ? ಇಲ್ಲಿದೆ ಮಾಹಿತಿ.... RCB

RCB
Published on

RCB : ಕಳೆದ 17 ವರ್ಷಗಳ ವನವಾಸದ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು (ಆರ್​ಸಿಬಿ) ಮೊದಲ ಬಾರಿ ಐಪಿಎಲ್​ ಟ್ರೋಫಿ ಜಯಿಸಿದೆ. ಸಾಕಷ್ಟು ಅವಮಾನ, ಟ್ರೊಲ್ ಎಲ್ಲವನ್ನು ಸಹಿಸಿಕೊಂಡ ಆರ್​ಸಿಬಿ ಐಪಿಎಲ್ 18ನೇ ಆವೃತ್ತಿಯಲ್ಲಿ ಚೊಚ್ಚಲ ಕಪ್ ಎತ್ತಿ ಹಿಡಿದಿದೆ. ಈ ಹಿನ್ನೆಲೆಯಲ್ಲಿ ಆರ್​ಸಿಬಿ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜೂನ್​ 04) ವಿಧಾನಸೌಧದಲ್ಲಿ ಸನ್ಮಾನಿಸಲಿದ್ದಾರೆ.

ಆರ್​ಸಿಬಿ ತಂಡಕ್ಕೆ ಸರ್ಕಾರದಿಂದ ಸನ್ಮಾನ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಇಂದು ವಿಧಾನಸೌಧದ ಒಳಗೆ ಪ್ರವೇಶವಿಲ್ಲ. ಪಾಸ್​ ಇದ್ದವರಿಗೆ ಮಾತ್ರ ವಿಧಾನಸೌಧಕ್ಕೆ ಎಂಟ್ರಿ ಸಿಗಲಿದೆ. ಇಂದು ಮಧ್ಯಾಹ್ನ 1.30ಕ್ಕೆ ಅಹಮದಬಾದ್​ನಿಂದ ಬೆಂಗಳೂರಿಗೆ ಬಂದಿಳಿಯಲಿರುವ ಆರ್​ಸಿಬಿ ತಂಡ ನೇರವಾಗಿ ತಾಜ್​ ವೆಸ್ಟೆಂಡ್​ ಹೋಟೆಲ್​ಗೆ ತೆರಳಲಿದೆ. ಬಳಿಕ ಅಲ್ಲಿಂದ ಸಿಎಂ ಸಿದ್ದರಾಮಯ್ಯ ಅವರ ನಿವಾಸಕ್ಕೆ ತೆರಳಿ ಭೋಜನ ಕೂಟದಲ್ಲಿ ಭಾಗವಹಿಸಲಿದೆ.

ಸಂಜೆ 4 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಆರ್​ಸಿಬಿ ತಂಡವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸನ್ಮಾನಿಸಲಿದ್ದಾರೆ. ಅದಕ್ಕಾಗಿ ವಿಧಾನಸೌಧದ ಮೆಟ್ಟಿಲುಗಳಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಬಳಿಕ ಆರ್​ಸಿಬಿ ತಂಡ ತೆರೆದ ಬಸ್​ನಲ್ಲಿ ವಿಜಯೋತ್ಸವ ಮೆರವಣಿಗೆ ಆರಂಭಿಸಲಿದೆ. ವಿಧಾನಸೌಧದಿಂದ ಆರಂಭವಾಗಲಿರುವ ವಿಕ್ಟರಿ ಪರೇಡ್​ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಕ್ತಾಯಗೊಳ್ಳಿದೆ. ಸಂಜೆ 6 ಗಂಟೆಯಿಂದ ಚಿನ್ನಾಸ್ವಾಮಿ ಕ್ರೀಡಾಂಗಣದಲ್ಲಿ ಅಭಿನಂದನಾ ಕಾರ್ಯಕ್ರಮ ನಡೆಯಲಿದೆ.

ಇಂದು ಇಡೀ ಬೆಂಗಳೂರು ಕೆಂಪು ಬಣ್ಣದಿಂದ ಕಂಗೊಳಿಸಲಿದ್ದು, ನಗರದಲ್ಲಿ ಭಾರಿ ಬಿಗಿ ಬಂದೋಬಸ್ತ್​ ಏರ್ಪಡಿಸಲಾಗಿದೆ. ವಿಕ್ಟರಿ ಪರೇಡ್​ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಸಾಕಷ್ಟು ಅಭಿಮಾನಿಗಳು ಬೆಂಗಳೂರಿನತ್ತ ಆಗಮಿಸುತ್ತಿದ್ದು, ಸಂಜೆ ವಿಧಾನಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಭಾರಿ ಸಂಚಾರ ದಟ್ಟಣೆ ಇರಲಿದೆ.

ಇನ್ನು ಪಂದ್ಯದ ವಿಚಾರಕ್ಕೆ ಬಂದರೆ, ಫೈನಲ್​ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ, ನಿಗದಿತ 20 ಓವರ್‌ಗಳಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 190 ರನ್ ಗಳಿಸಿತು. ವಿರಾಟ್ ಕೊಹ್ಲಿ (43 ರನ್​, 35 ಎಸೆತ, 3 ಬೌಂಡರಿ) ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮಯಾಂಕ್ ಅಗರ್ವಾಲ್ (24), ರಜತ್ ಪಟಿದಾರ್ (26), ಲಿಯಾಮ್ ಲಿವಿಂಗ್‌ಸ್ಟೋನ್ (25), ಮತ್ತು ಜಿತೇಶ್ ಶರ್ಮಾ (24) ಉಪಯುಕ್ತ ರನ್​ಗಳ ಕಾಣಿಕೆ ನೀಡಿದರು. ಪಂಜಾಬ್ ಬೌಲರ್‌ಗಳಲ್ಲಿ ಅರ್ಷದೀಪ್ ಸಿಂಗ್ ಮತ್ತು ಜೇಮಿಸನ್ ತಲಾ ಮೂರು ವಿಕೆಟ್ ಪಡೆದರು. ವಿಜಯ್ ಕುಮಾರ್ ವೈಶಾಕ್ ಮತ್ತು ಚಾಹಲ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಪಂಜಾಬ್​ ಪರ ಶಶಾಂಕ್ ಸಿಂಗ್ (ಅಜೇಯ 61 ರನ್​, 30 ಎಸೆತ, 3 ಬೌಂಡರಿ, 6 ಸಿಕ್ಸರ್) ಮತ್ತು ಜೋಶ್ ಇಂಗ್ಲಿಷ್ (39 ರನ್​, 23 ಎಸೆತ, 1 ಬೌಂಡರಿ, 4 ಸಿಕ್ಸರ್) ಉತ್ತಮ ಪ್ರದರ್ಶನ ನೀಡಿದರು. ಆದರೆ, ಉಳಿದ ಬ್ಯಾಟ್ಸ್‌ಮನ್‌ಗಳು ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲರಾದರು, ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 184 ರನ್‌ಗಳಿಗೆ ಸೀಮಿತವಾಯಿತು. ಆರ್‌ಸಿಬಿ ಬೌಲರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಮತ್ತು ಕೃನಾಲ್ ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು. ಯಶ್ ದಯಾಳ್, ಜೋಶ್ ಹ್ಯಾಜಲ್‌ವುಡ್ ಮತ್ತು ರೊಮಾರಿಯೊ ಶೆಫರ್ಡ್ ತಲಾ ಒಂದು ವಿಕೆಟ್ ಪಡೆದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net