

RCB : ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಮಾರಮ್ಮನಹಳ್ಳಿಯಲ್ಲಿ ಆರ್ಸಿಬಿ ಅಭಿಮಾನಿಗಳು ವಿರಾಟ್ ಕೊಹ್ಲಿ ಕಟೌಟ್ ಎದುರು ಮೇಕೆ ಬಲಿ ನೀಡಿ ಹುಚ್ಚಾಟ ಮೆರೆದಿದ್ದಾರೆ. ಈ ಕುರಿತಾದ ಫೋಟೋ ಹಾಗೂ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಜಯಭೇರಿ ಬಾರಿಸಿತ್ತು. ಸಿಎಸ್ಕೆ ವಿರುದ್ಧ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಗೆಲ್ಲುತ್ತಿದ್ದಂತೆ ಕೊಹ್ಲಿ ಬ್ಯಾನರ್ ಮುಂದೆ ಅಭಿಮಾನಿಗಳು, ಮೇಕೆ ಬಲಿಕೊಟ್ಟು ಸಂಭ್ರಮಿಸಿದ್ದಾರೆ. ಮಾರಮ್ಮನಹಳ್ಳಿ ಗ್ರಾಮದಲ್ಲಿ ಆರ್ಸಿಬಿ ಅಭಿಮಾನಿಗಳು ಮಚ್ಚಿನಿಂದ ಮೇಕೆಯನ್ನು ಕಡಿದು ಕೊಹ್ಲಿ ಪೊಸ್ಟರ್ಗೆ ರಕ್ತಾಭಿಷೇಕ ಮಾಡಿದ್ದಾರೆ. ಇದೇ ದೃಶ್ಯವನ್ನು ತಮ್ಮ ಫೋನ್ನಲ್ಲಿ ಸೆರೆ ಮಾಡಿಕೊಂಡು call-me-143-kalki ಹೆಸರಿನ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಕೂಡಲೇ ಮೂವರು ಯುವಕರಾದ ಸಣ್ಣ ಪಾಲಯ್ಯ, ಜಯ್ಯಣ್ಣ, ತಿಪ್ಪೇಸ್ವಾಮಿ ವಿರುದ್ದ ಮೊಳಕಾಲ್ಮೂರು ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿಕೊಂಡಿದ್ದಾರೆ.