ಶೇ. 97ರಷ್ಟು ಎರಡು ಸಾವಿರದ ನೋಟು ವಾಪಸ್​; ಆರ್​ಬಿಐ ಮಾಹಿತಿ

2000 rupee
Published on

ಮುಂಬೈ: ಎರಡು ಸಾವಿರ ರೂಪಾಯಿ ಮೌಲ್ಯದ ನೋಟುಗಳ ಪೈಕಿ ಶೇಕಡ 97.38ರಷ್ಟು ಕರೆನ್ಸಿ ನೋಟುಗಳು ಬ್ಯಾಂಕಿಂಗ್​ ವ್ಯವಸ್ಥೆಗೆ ಮರಳಿದೆ. ಸುಮಾರು 9,330 ಕೋಟಿ ರೂಪಾಯಿಯಷ್ಟು ಮೌಲ್ಯದ ನೋಟುಗಳು ಮಾತ್ರವೇ ಸಾರ್ವಜನಿಕರ ಬಳಿ ಉಳಿದಿದೆ ಎಂದು ಭಾರತೀಯ ರಿಸರ್ವ್​ ಬ್ಯಾಂಕ್​ (ಆರ್​ಬಿಐ) ತಿಳಿಸಿದೆ.

2,000 ಮುಖಬೆಲೆಯ ನೋಟುಗಳನ್ನು ಪ್ರಸರಣದಿಂದ ಹಿಂಪಡೆಯಲಾಗುವುದೆಂದು ಆರ್​ಬಿಐ 2023ರ ಮೇ 19ರಂದು ಪ್ರಕಟಿಸಿತ್ತು. ಈ ಪ್ರಕಟಣೆ ಹೊರಡಿಸುವ ದಿನದ ವ್ಯವಹಾರದ ಅಂತ್ಯದ ವರೆಗೆ 3.56 ಲಕ್ಷ ಕೋಟಿ ರೂಪಾಯಿ ಮೊತ್ತದ 2,000ದ ಕರೆನ್ಸಿ ನೋಟುಗಳು ಚಲಾವಣೆಯಲ್ಲಿದ್ದವು. ಈಗ ಅದು 9,330 ಕೋಟಿ ರೂಪಾಯಿಗೆ ಇಳಿದಿದೆ ಎಂದು ಆರ್​ಬಿಐ ಹೇಳಿದೆ. ಆದರೆ 2,000 ಮುಖಬೆಲೆಯ ನೋಟುಗಳು ಈಗಲೂ ಕಾನೂನುಬದ್ಧವಾಗಿ ಮುಂದುವರಿಯುತ್ತದೆ ಎಂದು ಅದು ಸ್ಪಷ್ಟಪಡಿಸಿದೆ.

ಸೆಪ್ಟೆಂಬರ್​ 30ರೊಳಗೆ ಈ ನೋಟುಗಳನ್ನು ಬ್ಯಾಂಕ್​ಗಳಿಗೆ ಮರಳಿಸುವಂತೆ ಸೂಚಿಸಲಾಗಿತ್ತು. ನಂತರ ಅದನ್ನು ಅಕ್ಟೋಬರ್​ 7ರ ವರೆಗೆ ವಿಸ್ತರಿಸಲಾಗಿತ್ತು. ಜನರು ತಮ್ಮ ಖಾತೆಗಳಿಗೆ 2000ದ ನೋಟುಗಳನ್ನು ಜಮೆ ಮಾಡಬಹುದಾಗಿತ್ತು ಅಥವಾ ಅದಕ್ಕೆ ಬದಲಿಯಾಗಿ ಬೇರೆ ಮೌಲ್ಯದ ನೋಟುಗಳನ್ನು ಪಡೆಯಲು ಅವಕಾಶ ನೀಡಲಾಗಿತ್ತು. ನೋಟುಗಳ ವಿನಿಮಯಕ್ಕೆ ನಿಗದಿಪಡಿಸಲಾದ ಆರ್​ಬಿಐ ಕಚೇರಿಗಳ ಮುಂದೆ ಉದ್ದನೆಯ ಸರದಿ ಸಾಲುಗಳು ಕಂಡು ಬಂದಿದ್ದವು. 2016ರ ನವೆಂಬರ್​ನಲ್ಲಿ ಆಗ ಚಲಾವಣೆಯಲ್ಲಿದ್ದ 1,000 ಹಾಗೂ 500 ರೂಪಾಯಿ ಮುಖಬೆಲೆಯ ಕರೆನ್ಸಿಗಳನ್ನು ಅಮಾನ್ಯೀಕರಿಸಿದ ನಂತರ 2,000 ಮೌಲ್ಯದ ನೋಟುಗಳನ್ನು ಪರಿಚಯಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net