ಮೀಟರ್ ಬಡ್ಡಿ ಸಾಲಕ್ಕೆ ಡಿಜಿಟಲ್ ಸ್ಪರ್ಶ! - ವಂಚಕರ ಜಾಲಕ್ಕೆ ಬೀಳುವ ಮುನ್ನ...

OnlineLending
Published on

ಮುಂಬಯಿ: ಮೀಟರ್ ಬಡ್ಡಿ ಸಾಲ ನೀಡುವವರೂ ಈಗ ಜಾಣರಾಗಿದ್ದಾರೆ. ಅವರ ವ್ಯವಹಾರಕ್ಕೂ ಡಿಜಿಟಲ್ ಸ್ಪರ್ಶ ಸಿಕ್ಕಿದೆ. ಮನೆ ಮನೆಗೆ ಹೋಗಿ ಸಾಲ ನೀಡುವ ಬದಲು ಆ್ಯಪ್ ಡೌನ್​ಲೋಡ್ ಮಾಡಿಕೊಳ್ಳಿ, ಸೆಕೆಂಡ್​ಗಳಲ್ಲಿ ಸಾಲ ಪಡ್ಕೊಳ್ಳಿ ಅಂತ ಹೇಳೋಕೆ ಶುರುಮಾಡಿದ್ದಾರೆ. ಆದ್ದರಿಂದ ತತ್​ಕ್ಷಣದ ಹಣಕಾಸಿನ ಮುಗ್ಗಟ್ಟಿನಿಂದ ಚೇತರಿಸಿಕೊಳ್ಳಲು ಮೊಬೈಲ್ ಆ್ಯಪ್​ಗೆ ಲಾಗಿನ್ ಆಗಿ ಸುಲಭವಾಗಿ ಒಂದೇ ಕ್ಲಿಕ್​ನಲ್ಲಿ ಸಾಲ ಪಡೆಯಬಹುದು. ಇನ್ನೇಕೆ ತಡ ಎಂದು ಹಿಂದೆ ಮುಂದೆ ಯೋಚಿಸದೇ ಸಾಲ ಪಡೆದುಕೊಳ್ಳಬೇಡಿ. ಈ ರೀತಿ ಸಾಲ ತಗೊಂಡ್ರೆ ಸಂಕಷ್ಟಕ್ಕೆ ಸಿಲುಕೋದು ಗ್ಯಾರೆಂಟಿ!

ಸಮಸ್ಯೆ ಆದ್ರೆ ದೂರು ಕೊಡಿ ಗುರುತುಪರಿಚಯವಿಲ್ಲದ ಆ್ಯಪ್​ಗಳ ಮೂಲಕ ಸಾಲ ಪಡೆದುಕೊಂಡರೆ ನಿಮ್ಮ ಕೆವೈಸಿ ದಾಖಲೆಗಳು ಯಾರದ್ದೋ ಕೈ ಸೇರುತ್ತದೆ. ಅವರು ಅದನ್ನು ಬೇರೆ ರೀತಿಯಲ್ಲಿ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಇಂತಹ ಆ್ಯಪ್​ಗಳು ಗಮನಕ್ಕೆ ಬಂದರೆ ಅಥವಾ ಇಂತಹ ಆ್ಯಪ್​ಗಳಲ್ಲಿ ಸಾಲ ಪಡೆದು ತೊಂದರೆ ಒಳಗಾಗಿದ್ದರೆ https://sachet.rbi.org.in ಜಾಲತಾಣದಲ್ಲಿ ದೂರು ದಾಖಲಿಸಬಹುದು ಎಂದು ಆರ್​ಬಿಐ ತಿಳಿಸಿದೆ.

ಬಹುತೇಕ ಆ್ಯಪ್​ಗಳು ಅನಧಿಕೃತ. ಸಾಲ ನೀಡುವುದಕ್ಕೆ ಮತ್ತು ಹಿಂಪಡೆಯುವ ವಹಿವಾಟು ನಡೆಸುವುದಕ್ಕೆ ಅವುಗಳು ಪರವಾನಗಿ ಹೊಂದಿಲ್ಲ. ತ್ವರಿತವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಣ ಜಮೆಯಾಗುತ್ತದೆ. ಆದರೆ, ನಂತರ ಸಮಸ್ಯೆಗಳು ಶುರುವಾಗುತ್ತವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಸಾರ್ವಜನಿಕರನ್ನು ಎಚ್ಚರಿಸಿದೆ.

ಸಾರ್ವಜನಿಕರಿಂದ ಈ ಬಗ್ಗೆ ವೈಯಕ್ತಿಕವಾಗಿ ಬರುತ್ತಿರುವ ದೂರುಗಳ ಸಂಖ್ಯೆ ಹೆಚ್ಚಾದ ಕಾರಣ ಆರ್​ಬಿಐ ಈ ಎಚ್ಚರಿಕೆ ಸಂದೇಶ ಪ್ರಕಟಿಸಿದೆ. ಮೀಟರ್ ಬಡ್ಡಿ ಅಷ್ಟೇ ಅಲ್ಲ, ವಿವಿಧ ರೀತಿಯ ಶುಲ್ಕಗಳನ್ನೂ ಇಂತಹ ಆ್ಯಪ್​ಗಳು ವಿಧಿಸುತ್ತಿದ್ದು, ರಹಸ್ಯ ಶುಲ್ಕಗಳೂ ಇರುವ ಕಾರಣ ಸಾಲ ಹೊರೆಯಾಗಿ ಪರಿಣಮಿಸುತ್ತದೆ. ಈ ಬಗ್ಗೆ ಎಚ್ಚರವಿರಲಿ. ಬ್ಯಾಂಕುಗಳು ಮತ್ತು ಬ್ಯಾಂಕಿಂಗೇತರ ಹಣಕಾಸು ವಹಿವಾಟಿನ ಸಂಸ್ಥೆಗಳಿಗಷ್ಟೇ ಕಾನೂನು ಬದ್ಧ ಸಾಲ ವಿತರಣೆಗೆ ಅವಕಾಶವಿರುವಂಥದ್ದು ಎಂದು ಆರ್​ಬಿಐ ಸ್ಪಷ್ಟಪಡಿಸಿದೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net