

ಮಂಡ್ಯ: ರಾಜಕೀಯ ದ್ವೇಷದ ಕಾರಣಕ್ಕೆ ಕೆಲವರು ಸಾರ್ವಜನಿಕ ರಸ್ತೆ ಬಂದ್ ಮಾಡಿ ಕಬ್ಬು ಸಾಗಿಸಲು ಅಡ್ಡಿಪಡಿಸುತ್ತಿದ್ದಾರೆಂದು ಆರೋಪಿಸಿ ತಾಲೂಕಿನ ರಾಯಶೆಟ್ಟಿಪುರ ಗ್ರಾಮಸ್ಥರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿಯಿಂದ ತಲೆಯ ಮೇಲೆ ಕಬ್ಬಿನ ಕಂತೆ ಇಟ್ಟುಕೊಂಡು ಮೆರವಣಿಗೆ ಹೊರಟು, ಜಿಲ್ಲಾಧಿಕಾರಿ ಕಚೇರಿ ಬಳಿ ತೆರಳಿ ಧರಣಿ ನಡೆಸಿದರು. ಮಾತ್ರವಲ್ಲದೆ ರಸ್ತೆ ಮುಚ್ಚಿರುವವರ ಬೆಂಬಲಕ್ಕೆ ಶಾಸಕ ರವಿಕುಮಾರ್ ಗಣಿಗ ನಿಂತಿದ್ದಾರೆಂದು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಮಾಳೆಹಳ್ಳದಿಂದ ಹುಲ್ಲೆಕಟ್ಟೆ ಜಮೀನಿನವರೆಗೆ 80 ವರ್ಷದಿಂದ ಸರ್ವೆ ನಂ.20 ರಿಂದ 133 ರಲ್ಲಿ ಸಾರ್ವಜನಿಕ ಬಂಡಿದಾರಿ ಇತ್ತು. ಇದೀಗ ರಾಜಕೀಯ ದ್ವೇಷದಿಂದ ಬಂಡಿದಾರಿ ಅತಿಕ್ರಮಿಸಿ ಜೆಸಿಬಿ ಮೂಲಕ ಮುಚ್ಚಿ ಕಬ್ಬು ಸಾಗಿಸಲು ಅಡ್ಡಿಪಡಿಸಿ ದೌರ್ಜನ್ಯ ಮಾಡಲಾಗಿದೆ. ಪ್ರಮುಖವಾಗಿ ಬಂಡಿ ದಾರಿಗೂ ಹಾಗೂ ರಸ್ತೆಗೆ ಅಡ್ಡಿಪಡಿಸುತ್ತಿರುವ ಭೂ ಮಾಲೀಕತ್ವಕ್ಕೂ ಯಾವುದೇ ಸಂಬಂಧವಿಲ್ಲ. ಆದರೆ ಗ್ರಾಮ ಪಂಚಾಯಿತಿ ಚುನಾವಣಾ ರಾಜಕೀಯದ ದ್ವೇಷದ ಹಿನ್ನೆಲೆಯಲ್ಲಿ ಕಬ್ಬು ಸಾಗಾಟಕ್ಕೆ ಅಡ್ಡಿ ಮಾಡಲಾಗುತ್ತಿದೆ. ಕಿಡಿಗೇಡಿಗಳ ವಿರುದ್ಧ ಕೆರಗೋಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದರೂ, ಕಾನೂನು ಕ್ರಮ ಕೈಗೊಂಡಿಲ್ಲ. ಬದಲಾಗಿ ತಹಸೀಲ್ದಾರ್ ಅವರಿಗೆ ವರದಿ ಸಲ್ಲಿಸಿ ಕೈ ತೊಳೆದುಕೊಂಡಿದ್ದಾರೆ ಎಂದು ಕಿಡಿಕಾರಿದರು.
ಸಾರ್ವಜನಿಕ ರಸ್ತೆ ಬಂದ್ ಮಾಡಿರುವ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅನ್ಯಾಯ, ಅಕ್ರಮಕ್ಕೆ ಕುಮ್ಮಕ್ಕು ನೀಡುತ್ತಿರುವ ಒತ್ತಡಕ್ಕೆ ಮಣಿಯದೆ ಅಧಿಕಾರಿಗಳು ಕಾನೂನಿಗೆ ಮಾನ್ಯತೆ ನೀಡಿ ಕಬ್ಬು ಸಾಗಾಣಿಕೆಗೆ ಅವಕಾಶ ನೀಡಬೇಕು. ಸಾರ್ವಜನಿಕ ರಸ್ತೆ ಮುಚ್ಚಿರುವುದನ್ನು ತೆರೆವುಗೊಳಿಸಿ ಕಬ್ಬು ಸಾಗಾಣಿಕೆಗೆ ಪೊಲೀಸ್ ರಕ್ಷಣೆ ನೀಡಬೇಕು. ಮಾಳೆ ಹಳ್ಳದಿಂದ ಆಬಲವಾಡಿಗೆ ಹೋಗುವ ಬಂಡಿದಾರಿ ನಕಾಶೆ ರಸ್ತೆ ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತ ಅವಕಾಶ ಕಲ್ಪಿಸಬೇಕು. ದಲಿತರ ಸ್ಮಶಾನಕ್ಕೆ ಅಗತ್ಯವಿರುವ ಸರ್ವೆ ನಂ. 20ರ ಗೋಮಾಳದ ಭೂಮಿಯಲ್ಲಿ ರಸ್ತೆ ಮಾಡಿಸಬೇಕು. ಸ್ಮಶಾನ ಒತ್ತುವರಿ ತೆರವುಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಲು ಕ್ರಮ ವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾ.ಪಂ ಸದಸ್ಯ ಕೃಷ್ಣೇಗೌಡ, ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ, ಗ್ರಾಮಸ್ಥರಾದ ವಿಜಯಮ್ಮ, ನಂದೀಶ್, ಆರ್.ಕೆ.ಜಯರಾಮ್, ಯೋಗೇಶ್, ಕೃಷ್ಣ, ರಮೇಶ್, ಆರ್.ಎಲ್.ಸುಷ್ಮಾ, ಜಗದೀಶ, ರಮೇಶ, ಆರ್.ಎಲ್.ಪುಟ್ಟಲಿಂಗೇಗೌಡ ಇತರರಿದ್ದರು.