

ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಕರೊನಾದಿಂದಾಗಿ ದೇಶದ ಜನತೆ ಆತಂಕದ ಸ್ಥಿತಿಯಲ್ಲಿದ್ದಾರೆ. ಹೆಚ್ಚಾಗಿ ಭೀತಿ ಆವರಿಸಿದೆ. ಅದೆಲ್ಲವನ್ನು ಹೋಗಲಾಡಿಸುವ ಉದ್ದೇಶದಿಂದ ಎಲ್ಲ ರಾಜ್ಯ ಸರ್ಕಾರಗಳು ಒಂದಲ್ಲ ಒಂದು ಪ್ರಯತ್ನಕ್ಕೆ ಮುಂದಾಗುತ್ತಿವೆ. ಜನತೆಗೆ ಜಾಗೃತಿ ಮೂಡಿಸುತ್ತಿವೆ. ಸಿನಿಮಾ, ಕ್ರೀಡೆ ಸೇರಿ ಹಲವು ರಂಗಗಳಲ್ಲಿನ ನುರಿತರಿಂದ ಭಯ ದೂರ ಮಾಡಿಸುವ ಕಾರ್ಯಕ್ಕೆ ಮುಂದಾಗಿದೆ. ಅದೇ ರೀತಿ ರಾಜ್ಯ ಪೊಲೀಸ್ ಇಲಾಖೆ ಸಿನಿಮಾ ಸ್ಟಾರ್‌ಗಳಿಂದ ಕರೊನಾ ಜಾಗೃತಿ ಮೂಡಿಸುತ್ತಿದೆ. ಈಗ ಕ್ರೇಜಿ ಸ್ಟಾರ್ ರವಿಚಂದ್ರನ್ ಜನತೆಗೆ ಅವರ ಶೈಲಿಯಲ್ಲಿಯೇ ಹೇಳಿದ್ದಾರೆ. ಏನೆಲ್ಲ ಮಾತನಾಡಿದ್ದಾರೆ ಅದೆಲ್ಲವೂ ಇಲ್ಲಿದೆ ...
ಕರೊನಾಗೆ ಬೆಂಕಿ ಹಚ್ಚಬೇಕೆಂದರೆ, ಮನೆ ದೀಪ ಆರಬಾರದು ಎಂದರೆ, ನೀವು ಮನೆಯಲ್ಲಿರಬೇಕು. ದೇವಸ್ಥಾನಗಳು ಮುಚ್ಚಿವೆ ಅಂದರೆ ದೇವರು ಇಲ್ಲ ಅಂತಾನಾ? ವೈದ್ಯರಲ್ಲಿ, ನರ್ಸ್‌ಗಳಲ್ಲಿ, ಪೊಲೀಸರಲ್ಲಿ ಕರೊನಾ ಸಲುವಾಗಿ ಹೋರಾಡುತ್ತಿರುವ, ಸೇವೆ ಸಲ್ಲಿಸುತ್ತಿರುವ ಎಲ್ಲರೂ ಈ ಸಮಯದಲ್ಲಿ ದೇವರುಗಳೇ. ಹಾಗಾಗಿ ಆ ದೇವರಲ್ಲಿ ನಂಬಿಕೆ ಇದ್ದರೆ, ನೀವು ಮಾಡಬೇಕಿರುವುದು ಇಷ್ಟೇ. ಅವರೆಲ್ಲರಿಗೂ ಒಂದು ಸೆಲ್ಯೂಟ್, ನಮಸ್ಕಾರ, ಒಂದು ಪ್ಲೈಯಿಂಗ್ ಕಿಸ್ ಕೊಡಿ. ಏಕೆಂದರೆ, ಅವರ ಋಣ ನಾವು ಎಷ್ಟು ಜನ್ಮ ಎತ್ತಿ ಬಂದರೂ ತೀರಿಸಲು ಆಗಲ್ಲ. ಅದನ್ನು ತೀರಿಸಬೇಕೆಂದರೆ ಮನೆಯಲ್ಲಿರಿ. ಅವರನ್ನು ಕರೊನಾ ಜತೆ ಹೋರಾಟ ಮಾಡಲು ಬಿಡಿ. ನಿಮ್ಮ ಜತೆ ಹೋರಾಡುವುದಲ್ಲ. ನೀವು ಕರೊನಾಕ್ಕೆ ತಿಥಿ ಮಾಡಬೇಕೆಂದರೆ, ನೀವು ಅದಕ್ಕೆ ಅತಿಥಿ ಆಗಬಾರದು. ಮನುಷ್ಯನಿಗೆ ಕಷ್ಟ ಬಂದಾಗಲೇ ಅದನ್ನು ಹೇಗೆ ನಿಭಾಯಿಸುತ್ತಾನೆ ಅನ್ನೋದರ ಮೇಲೆ ಅವನ ವ್ಯಕ್ತಿತ್ವ ಗೊತ್ತಾಗುತ್ತೆ. ಅಂಥ ಪರೀಕ್ಷೆ ಈಗ ಬಂದಿದೆ. ಪರೀಕ್ಷೆ ಪಾಸ್ ಮಾಡಬೇಕು. ಅದರ ಜತೆ ಸೋಶಿಯಲ್ ಡಿಸ್ಟೆನ್ಸ್ ಪಾಲಿಸಬೇಕು. ಫೇಲ್ ಆಗಬೇಕು ಎಂದರೆ ಮನೆಯಿಂದ ಹೊರಬನ್ನಿ. ಹೊರಬಂದರೆ ನಿಮಗೆ ನಿಮ್ಮ ಹೆಸರೂ ಇರುವುದಿಲ್ಲ. ಆಸ್ಪತ್ರೆಯಲ್ಲಿ ರೋಗಿ ನಂಬರ್ ಕೊಡುತ್ತಾರೆ. ಹಾಗಾಗಿ ಮನೆಯಲ್ಲೇ ಇರಿ ...
ಹೀಗೆ ತಮ್ಮದೇ ರೀತಿಯಲ್ಲಿ ರವಿಚಂದ್ರನ್ ಜನರಿಗೆ ಹುಷಾರಾಗಿರುವಂತೆ ಕರೆ ನೀಡಿದ್ದಾರೆ. ಅವರ ಮಾತನ್ನಾದರೂ ಜನರು ಪಾಲಿಸುತ್ತಾರಾ ಎಂದು ನೋಡಬೇಕಿದೆ.