46 ವರ್ಷ ಬಳಿಕ ತೆರೆದ ರತ್ನಭಂಡಾರ

ಭುವನೇಶ್ವರ: ಒಡಿಶಾದ ಪುರಿ ಜಗನ್ನಾಥ ದೇವಸ್ಥಾನದ ನೆಲಮಾಳಿಗೆಯಲ್ಲಿರುವ, ಅಪಾರ ಪ್ರಮಾಣದ ಚಿನ್ನ-ಬೆಳ್ಳಿ-ವಜ್ರದ ಆಭರಣಗಳಿರುವ ‘ರತ್ನಭಂಡಾರ’ದ ಕೊಠಡಿಯನ್ನು 46 ವರ್ಷಗಳ ಬಳಿಕ ಭಾನುವಾರ ತೆರೆಯಲಾಯಿತು. ರಾಜ್ಯದ ಬಿಜೆಪಿ ಸರ್ಕಾರ ನೇಮಕ ಮಾಡಿರುವ 12 ಸದಸ್ಯರ ಸಮಿತಿಯ ಸದಸ್ಯರು ಮಧ್ಯಾಹ್ನ 12 ಗಂಟೆ ಸುಮಾರಿಗೆ ಶ್ರೀ ಜಗನ್ನಾಥ ದೇವರಿಗೆ ಪೂಜೆ ಸಲ್ಲಿಸಿದ ಬಳಿಕ 1.28ಕ್ಕೆ ಸರಿಯಾಗಿ ರತ್ನಭಂಡಾರವನ್ನು ತೆರೆದರು. ಮಂಗಳಕರ ಎನ್ನಲಾದ ಈ ಸಮಯವನ್ನು (1.28) ಬೆಳಗ್ಗೆ ನಡೆದ ಸಭೆಯೊಂದರಲ್ಲಿ ತೀರ್ವನಿಸಲಾಗಿತ್ತು. ಸಮಿತಿ ಅಧ್ಯಕ್ಷರೂ ಆಗಿರುವ ಒಡಿಶಾ ಹೈಕೋರ್ಟ್ ನ್ಯಾಯಮೂರ್ತಿ ಬಿಸ್ವನಾಥ್ ರಥ್, ಶ್ರೀ ಜಗನ್ನಾಥ ದೇವಸ್ಥಾನ ಆಡಳಿತ ಮಂಡಳಿಯ ಮುಖ್ಯ ಆಡಳಿತಾಧಿಕಾರಿ ಅರಬಿಂದ ಪಾಧೀ, ಕೇಂದ್ರ ಪುರಾತತ್ವ ಇಲಾಖೆ ಅಧೀಕ್ಷಕ ಡಿ.ಬಿ. ಗಡನಾಯಕ್, ಪುರಿಯ ರಾಜವಂಶಸ್ಥ ಗಜಪತಿ ಮಹಾರಾಜ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಜೊತೆಗೆ ದೇಗುಲದ ಪ್ರಮುಖ ನಾಲ್ವರು ಸೇವಕರೂ ಇದ್ದರು. ಸಂಜೆ 5.20ರ ಸುಮಾರಿಗೆ ಇವರೆಲ್ಲ ರತ್ನಭಂಡಾರ ಪ್ರಾಂಗಣದಿಂದ ಹೊರಬಂದರು.

12ನೇ ಶತಮಾನದ ದೇಗುಲ

ಪುರಿಯ ಶ್ರೀ ಜಗನ್ನಾಥ ದೇವಸ್ಥಾನವು ಭಾರತದ ಅತ್ಯಂತ ಆಕರ್ಷಕ ದೇಗುಲಗಳಲ್ಲಿ ಒಂದಾಗಿದ್ದು, ಇದನ್ನು 12ನೇ ಶತಮಾನದಲ್ಲಿ ಗಂಗರ ಸಾಮ್ರಾಜ್ಯದ ಅನಂತ ವರ್ಮನ್ ಚೋಡಗಂಗದೇವ ಕಟ್ಟಿಸಿದ್ದ ಎಂದು ಹೇಳಲಾಗಿದೆ.

ಕೀಲಿ ಮುರಿದು ಒಳಪ್ರವೇಶ

‘ಮಾರ್ಗಸೂಚಿ ಪ್ರಕಾರ, ರತ್ನಭಂಡಾರದ ಹೊರಕೋಣೆಯನ್ನು ಮೊದಲು ತೆರೆಯಲಾಯಿತು. ಎಲ್ಲ ಆಭರಣಗಳನ್ನು ಸಮೀಪದ ತಾತ್ಕಾಲಿಕ ಸ್ಟ್ರಾಂಗ್​ರೂಮ್ೆ ದೊಡ್ಡ ಪೆಟ್ಟಿಗೆಗಳಲ್ಲಿ ಸ್ಥಳಾಂತರಿಸಿ, ಸೀಲ್ ಮಾಡಲಾಯಿತು. ಬಳಿಕ ಒಳಕೋಣೆಯ ಬಾಗಿಲನ್ನು ಲಭ್ಯವಿರುವ ಕೀಲಿಕೈಗಳಿಂದ ತೆರೆಯಲು ಪ್ರಯತ್ನಿಸಲಾಯಿತು. ಸಾಧ್ಯವಾಗದಿದ್ದಾಗ, ಮಾರ್ಗಸೂಚಿ ಪ್ರಕಾರ ಮೂರೂ ಕೀಲಿಗಳನ್ನು ಮ್ಯಾಜಿಸ್ಟ್ರೇಟ್ ಸಮ್ಮುಖದಲ್ಲಿ ಮುರಿದು ಒಳಪ್ರವೇಶಿಸಲಾಯಿತು. ಅಲ್ಲಿರುವ ಬೀರುಗಳು ಮತ್ತು ಪೆಟ್ಟಿಗೆಗಳಲ್ಲಿದ್ದ ಆಭರಣಗಳನ್ನು ತಪಾಸಣೆ ಮಾಡಲಾಯಿತು’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಪಾಧೀ ಸುದ್ದಿಗಾರರಿಗೆ ತಿಳಿಸಿದರು.

ಸ್ಥಳಾಂತರ ಸದ್ಯಕ್ಕಿಲ್ಲ

‘ಒಳಕೋಣೆಯಲ್ಲಿರುವ ಆಭರಣಗಳನ್ನು ಸ್ಥಳಾಂತರಿಸಲು ಸಾಕಷ್ಟು ಸಮಯ ಬೇಕಾಗುವುದರಿಂದ ಈಗಲೇ ಸ್ಥಳಾಂತ ರಿಸದಿರಲು ಸಮಿತಿ ನಿರ್ಧರಿಸಿತು. ಒಂದೇ ಬಾರಿಗೆ ಸ್ಥಳಾಂತರ ಮಾಡಬೇಕಾಗುತ್ತದೆ. ಹಾಗಾಗಿ ಅದು ಇಂದು ಸಾಧ್ಯವಾಗಲಿಲ್ಲ. ಬಹುಧಾ ಯಾತ್ರಾ, ಸುನಾ ವೇಷಾ ಆಚರಣೆಗಳ ಬಳಿಕ ಅದಕ್ಕೆ ಇನ್ನೊಂದು ದಿನಾಂಕ ನಿಗದಿಪಡಿಸಲಾಗುವುದು’ ಎಂದು ಪಾಧೀ ಹೇಳಿದರು.

ಇಡೀ ಪ್ರಕ್ರಿಯೆ ವಿಡಿಯೋಗ್ರಫಿ

ಇಂದು ನಡೆದ ರತ್ನಭಂಡಾರ ತೆರೆಯುವ ಇಡೀ ಪ್ರಕ್ರಿಯೆಯನ್ನು ವಿಡಿಯೋಗ್ರಾಫ್ ಮಾಡಲಾಯಿತು. ಪುರಾತತ್ವ ಇಲಾಖೆಯ ಸಿಬ್ಬಂದಿ ಹೊರಕೋಣೆ, ಒಳಕೋಣೆ ಎರಡರಲ್ಲೂ ಆಗಬೇಕಾಗಿರುವ ದುರಸ್ತಿ ಕಾರ್ಯದ ಅಂದಾಜು ಮಾಡಿದರು.

ಸಿಸಿಟಿವಿ ಕ್ಯಾಮರಾ ಕಾವಲು

ದೇವಸ್ಥಾನ ಪ್ರವೇಶಿಸುವ ಮುನ್ನ ಸುದ್ದಿಗಾರರ ಜತೆ ಮಾತನಾಡಿದ ಪಾಧೀ, ‘ರತ್ನಭಂಡಾರದ ಬಾಗಿಲನ್ನು ಇಂದು ತೆರೆದರೂ ಆಭರಣಗಳ ಎಣಿಕೆಯನ್ನು ಈಗ ಮಾಡಲಾಗುವುದಿಲ್ಲ. ಒಳಗಿನ ಮತ್ತು ಹೊರಗಿನ ಕೋಣೆಗಳಿಂದ ಬೃಹತ್ ಪೆಟ್ಟಿಗೆಗಳಲ್ಲಿ ಮೊದಲು ತಾತ್ಕಾಲಿಕ ಸ್ಟ್ರಾಂಗ್​ರೂಮ್ೆ ಸ್ಥಳಾಂತರಿಸಲಾಗುವುದು. ಸ್ಥಳದಲ್ಲಿ ಸಿಸಿಟಿವಿ ಕ್ಯಾಮರಾಗಳ ಅಳವಡಿಕೆ ಸೇರಿದಂತೆ ಎಲ್ಲ ಸುರಕ್ಷತಾ ವ್ಯವಸ್ಥೆ ಮಾಡಲಾಗಿದೆ. ಸರ್ಕಾರದ ಒಪ್ಪಿಗೆ ಪಡೆದ ಬಳಿಕ ಅಕ್ಕಸಾಲಿಗರು, ಮೌಲ್ಯಮಾಪಕರು ಮತ್ತು ಇತರ ತಜ್ಞರನ್ನು ಕರೆತಂದು ಎಣಿಕೆ ಮಾಡಲಾಗುವುದು. ಪಾಳು ಬಿದ್ದಿರುವ ರತ್ನಭಂಡಾರ ಕಟ್ಟಡದ ಸುರಕ್ಷೆ ನಮ್ಮ ಮೊದಲ ಆದ್ಯತೆ. ಅಲ್ಲಿ ಅಗತ್ಯವಿರುವ ದುರಸ್ತಿ ಕೈಗೊಂಡ ನಂತರ ಆಭರಣಗಳನ್ನು ಮತ್ತೆ ಅಲ್ಲಿಗೇ ತಂದು ಎಣಿಕೆ ಪ್ರಾರಂಭಿಸಲಾಗುವುದು’ ಎಂದು ವಿವರಿಸಿದರು.

ಮೂರ್ಛೆ ಹೋಗಿದ್ದ ಎಸ್ಪಿ!

ರತ್ನಭಂಡಾರವನ್ನು ಸಮಿತಿಯ ಸದಸ್ಯರು ಪ್ರವೇಶಿಸುತ್ತಿದ್ದಂತೆಯೇ ಅವರ ಜತೆಗಿದ್ದ ಪುರಿಯ ಹಿರಿಯ ಪೊಲೀಸ್ ಅಧಿಕಾರಿ (ಎಸ್​ಪಿ) ಪಿನಾಕ ಮಿಶ್ರಾ ಮೂರ್ಛೆ ಹೋಗಿ ಕುಸಿದು ಬಿದ್ದ ಘಟನೆ ನಡೆಯಿತು. ಸಮಿತಿಯ ಇನ್ನೊಬ್ಬ ಸದಸ್ಯ ಡಾ. ಸಿಬಿಕೆ ಮೊಹಂತಿ ಕೂಡಲೇ ಎಸ್​ಪಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರು. ಕೆಲವೇ ನಿಮಿಷಗಳಲ್ಲಿ ಅವರು ಚೇತರಿಸಿಕೊಂಡರು ಎನ್ನಲಾಗಿದೆ. ಕೆಲ ಸಮಯದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಸ್​ಪಿ, ‘ನನಗೆ ಏನೂ ಆಗಿಲ್ಲ. ಆರೋಗ್ಯದಿಂದ ಇದ್ದೇನೆ’ ಎಂದು ಹೇಳಿದರು.

ಡಿಜಿಟಲ್ ಕ್ಯಾಟಲಾಗ್

ಒಟ್ಟು ಆಭರಣಗಳು ಎಷ್ಟು ಇವೆ, ಯಾವ ಲೋಹದಿಂದ ಮಾಡಲಾಗಿದೆ, ಪ್ರತಿಯೊಂದರ ತೂಕ ಎಷ್ಟು, ವಿನ್ಯಾಸ ಯಾವ ರೀತಿ ಇದೆ ಎಂಬುದನ್ನು ವಿಸõತವಾಗಿ ದಾಖಲಿಸುವುದಕ್ಕಾಗಿ ಡಿಜಿಟಲ್ ಕ್ಯಾಟಲಾಗ್ ರೂಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ಮಾರ್ಗಸೂಚಿಗಳ ರಚನೆ

ಇಡೀ ಪ್ರಕ್ರಿಯೆಗೆ ಮೂರು ರೀತಿಯ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ. ರತ್ನಭಂಡಾರವನ್ನು ತೆರೆಯುವುದಕ್ಕೆ ಸಂಬಂಧಿಸಿದಂತೆ ಒಂದು ಮಾರ್ಗಸೂಚಿ, ತಾತ್ಕಾಲಿಕ ಸ್ಟ್ರಾಂಗ್​ರೂಮ್ ನಿರ್ವಹಣೆಗೆ ಸಂಬಂಧಿಸಿದಂತೆ ಇನ್ನೊಂದು ಮಾರ್ಗಸೂಚಿ ಹಾಗೂ ಆಭರಣಗಳ ಎಣಿಕೆಗೆ ಸಂಬಂಧಿಸಿ ಮಗದೊಂದು ಮಾರ್ಗಸೂಚಿ ರಚಿಸಲಾಗಿದೆ.

ಬೃಹತ್ ಪೆಟ್ಟಿಗೆಗಳಲ್ಲಿ ಸ್ಥಳಾಂತರ

ಈಗಿರುವ ಸ್ಥಳದಿಂದ ಚಿನ್ನ ಬೆಳ್ಳಿ ವಜ್ರದ ಆಭರಣಗಳನ್ನು ಸಮೀಪದ ಸ್ಟ್ರಾಂಗ್​ರೂಮ್ೆ ಸ್ಥಳಾಂತರಿಸಲು ಬೃಹತ್ ಪೆಟ್ಟಿಗೆಗಳನ್ನು ದೇವಸ್ಥಾನಕ್ಕೆ ಇಂದು ತರಲಾಗಿತ್ತು. ಈ ಆರು ಪೆಟ್ಟಿಗೆಗಳೂ ನಾಲ್ಕೂವರೆ ಅಡಿ ಉದ್ದ, ಎರಡೂವರೆ ಅಡಿ ಎತ್ತರ ಮತ್ತು ಎರಡೂವರೆ ಅಡಿ ಅಗಲ ಇವೆ. ಟೀಕ್​ವುಡ್​ನಿಂದ ಮಾಡಿರುವ ಈ ಪೆಟ್ಟಿಗೆಗಳ ಒಳಗೆ ಹಿತ್ತಾಳೆ ಹಾಳೆಯ ಲೇಪವಿದೆ. ಯಾರೂ ಸುಲಭವಾಗಿ ಇವುಗಳನ್ನು ಕೊರೆದು ಆಭರಣದವರೆಗೆ ತಲುಪಲು ಸಾಧ್ಯವಿಲ್ಲ. ಇಂತಹ 15 ಪೆಟ್ಟಿಗೆಗಳನ್ನು ತಯಾರಿಸಲು ಜು. 12ರಂದು ಆರ್ಡರ್ ನೀಡಲಾಗಿತ್ತು. ಆದರೆ ಕಳೆದ 48 ಗಂಟೆಗಳಲ್ಲಿ 6 ಪೆಟ್ಟಿಗೆ ಮಾತ್ರ ತಯಾರಿಸಲು ಸಾಧ್ಯವಾಯಿತು ಎನ್ನುತ್ತಾರೆ ಒಬ್ಬ ಅಧಿಕಾರಿ.

ಇಂಜಿನಿಯರ್​ಗಳ ನಿಯುಕ್ತಿ

ರತ್ನಭಂಡಾರದ ಕಟ್ಟಡ ದುರಸ್ತಿಗಾಗಿ ಕೇಂದ್ರ ಪುರಾತತ್ವ ಇಲಾಖೆ ಹಲವಾರು ಸ್ಟ್ರಕ್ಚರಲ್, ಮೆಕ್ಯಾನಿಕಲ್ ಮತ್ತು ಸಿವಿಲ್ ಇಂಜಿನಿಯರ್​ಗಳನ್ನು ನಿಯುಕ್ತಿ ಮಾಡಿದೆ ಎಂದು ಇಲಾಖೆಯ ಹಿರಿಯ ಅಧಿಕಾರಿ ಗಡನಾಯಕ್ ತಿಳಿಸಿದರು.

ಏನೇನಿದೆ ಈ ಭಂಡಾರದಲ್ಲಿ?

ಒಡಿಶಾ ಮ್ಯಾಗಜಿನ್ ಪ್ರಕಾರ, ಹಿಂದೆ ರಾಜನಾಗಿದ್ದ ಅನಂಗಭೀಮದೇವನು ಶ್ರೀ ಜಗನ್ನಾಥ ದೇವರಿಗೆ, ದೇವಿ ಸುಭದ್ರೆ ಮತ್ತು ಶ್ರೀ ಬಲಭದ್ರರಿಗೆ ಆಭರಣಗಳನ್ನು ತಯಾರಿಸಲು ಎರಡೂವರೆ ಲಕ್ಷ ಬಂಗಾ ರದ ನಾಣ್ಯಗಳನ್ನು ದೇವಸ್ಥಾನಕ್ಕೆ ನೀಡಿದ್ದ. ರತ್ನಭಂಡಾರದ ಹೊರಕೋಣೆಯಲ್ಲಿ ಶ್ರೀ ಜಗನ್ನಾಥನ ಬಂಗಾರದ ಕಿರೀಟ, ತಲಾ 120 ತೊಲ ತೂಕದ ಮೂರು ಚಿನ್ನದ ನೆಕ್ಲೇಸ್​ಗಳು, ಚಿನ್ನದ ಶ್ರೀಭುಜ, ಪಾದುಕೆ ಮುಂತಾದವು ಇವೆ. ಒಳಕೋಣೆಯಲ್ಲಿ ತಲಾ ನೂರು ತೊಲ ತೂಕದ 74 ಚಿನ್ನದ ಆಭರಣಗಳಿವೆ. ಇದಲ್ಲದೆ, ಚಿನ್ನ, ಬೆಳ್ಳಿ, ಮುತ್ತು ರತ್ನ, ಹವಳ ಮುಂತಾದವುಗಳಿಂದ ತಯಾರಿಸಿರುವ ಅಲಂಕಾರಿಕ ತಟ್ಟೆಗಳಿವೆ. 140 ಬೆಳ್ಳಿ ಆಭರಣಗಳೂ ಇವೆ.

ಭರವಸೆ ಈಡೇರಿಸಿದ ಬಿಜೆಪಿ

ಇತ್ತೀಚಿನ ವರ್ಷಗಳಲ್ಲಿ ಈ ದೇವ ಸ್ಥಾನದ ರತ್ನಭಂಡಾರವನ್ನು ತೆರೆಯುವ ವಿಷಯ ಒಡಿಶಾದಲ್ಲಿ ಒಂದು ದೊಡ್ಡ ರಾಜಕೀಯ ವಿವಾದವಾಗಿ ಮಾರ್ಪಟ್ಟಿತ್ತು. ಇತ್ತೀಚೆಗೆ ನಡೆದ ಲೋಕಸಭೆ- ವಿಧಾನಸಭೆ ಚುನಾವಣೆಯಲ್ಲೂ ಈ ಬಗ್ಗೆ ಸಾಕಷ್ಟು ಚರ್ಚೆ ನಡೆದಿತ್ತು. ರತ್ನಭಂಡಾರದ ಕೀಲಿಕೈಗಳು ಕಳೆದುಹೋಗಲು ಬಿಜು ಜನತಾದಳ ಸರ್ಕಾರವೇ ಕಾರಣ ಎಂದು ಆರೋಪಿಸಿದ್ದ ಬಿಜೆಪಿ, ರಾಜ್ಯದಲ್ಲಿ ತಾನು ಅಧಿಕಾರಕ್ಕೆ ಬಂದರೆ ಪಾಳು ಬಿದ್ದಿರುವ ರತ್ನಭಂಡಾರದಲ್ಲಿ ಅವಶ್ಯವಿರುವ ದುರಸ್ತಿ ಕಾರ್ಯ ಕೈಗೊಳ್ಳುವುದಲ್ಲದೇ ಆಭರಣಗಳ ಎಣಿಕೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿತ್ತು. ಒಡಿಶಾದಲ್ಲಿ ಈಗ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಭರವಸೆ ಈಡೇರಿಸುವ ದಿಸೆಯಲ್ಲಿ ಮೊದಲ ಹೆಜ್ಜೆ ಇಟ್ಟಿದೆ.

1978ರಲ್ಲಿ ನಡೆದಿತ್ತು ಎಣಿಕೆ

ಇಲ್ಲಿನ ಆಭರಣಗಳನ್ನು ಕೊನೆಯ ಬಾರಿ ಅಧಿಕೃತವಾಗಿ ಎಣಿಸಿದ್ದು 46 ವರ್ಷಗಳ ಹಿಂದೆ, ಅಂದರೆ 1978ರಲ್ಲಿ. ಆಗ ಎಣಿಕೆಗೆ 70 ದಿನ ತಗುಲಿತ್ತು. ನಂತರ ಈ ಕೋಣೆಯ ಬಾಗಿಲನ್ನೇ ತೆರೆದಿರಲಿಲ್ಲ. ಈಗ್ಗೆ 6 ವರ್ಷಗಳ ಹಿಂದೆ ಕೋಣೆಯ ಕೀಲಿಕೈ ಕಳೆದುಹೋಗಿದೆ ಎಂಬ ಸುದ್ದಿ ಹರಡಿ ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಯಾಗಿತ್ತು. ಈಗ ಅಲ್ಲಿ ಎಷ್ಟು ಆಭರಣಗಳು ಉಳಿದಿವೆ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ.

ವಿಷಸರ್ಪಗಳಿಂದ ಕಾವಲು?

ಅಪಾರ ಮುತ್ತುರತ್ನ ಆಭರಣಗಳಿರುವ ಈ ರತ್ನಭಂಡಾರವನ್ನು ವಿಷಕಾರಿ ಸರ್ಪಗಳು ಕಾವಲು ಕಾಯುತ್ತಿವೆ ಎಂಬ ಪ್ರತೀತಿ ಒಡಿಶಾದ ಭಕ್ತ ವಲಯದಲ್ಲಿ ಮೊದಲಿನಿಂದಲೂ ಇದೆ. ಈ ಕಾರಣಕ್ಕೆ ಇಂದು ರತ್ನಭಂಡಾರದ ಬಾಗಿಲು ತೆರೆಯುವ ವೇಳೆ ಸುರಕ್ಷತೆ ದೃಷ್ಟಿಯಿಂದ ಉರಗ ರಕ್ಷಕರ ತಂಡವನ್ನು ನಿಯೋಜಿಸಲಾಗಿತ್ತು. ಅದರಲ್ಲಿದ್ದ ಸ್ನೇಕ್ ಹೆಲ್ಪ್​ಲೈನ್ ಸದಸ್ಯ ಸುಧೇಂದು ಮಲಿಕ್ ಮಾತನಾಡಿ, ‘ರಾಜ್ಯ ಸರ್ಕಾರದ ನಿರ್ದೇಶನದ ಮೇರೆಗೆ ನಾವು ಇಲ್ಲಿಗೆ ಬಂದಿದ್ದೇವೆ. ಉರಗರಕ್ಷಕರ ಎರಡು ತಂಡಗಳು ಸಿದ್ಧವಾಗಿವೆ. ಸರ್ಕಾರದ ಆದೇಶ ಅನುಸರಿಸಿ, ಸಂದರ್ಭಕ್ಕನುಗುಣವಾಗಿ ನಮ್ಮ ಕೆಲಸ ನಿರ್ವಹಿಸುತ್ತೇವೆ’ ಎಂದು ಹೇಳಿದರು. ಆದರೆ ಸ್ಥಳದಲ್ಲಿ ಇಂದು ಯಾವುದೇ ಹಾವು ಕಾಣಿಸಲಿಲ್ಲ.

ಕೀಲಿಕೈಗಳು ಎಲ್ಲಿದ್ದವು?

ಹೊರಗಿನ ಕೋಣೆಯ ಮೂರು ಕೀಲಿಕೈಗಳು ಲಭ್ಯವಿವೆ. ಅದರಲ್ಲೊಂದು ಗಜಪತಿ ಮಹಾರಾಜರ ಬಳಿ ಇತ್ತು. ಇನ್ನೊಂದು ದೇವಸ್ಥಾನದ ಆಡಳಿತ ಮಂಡಳಿ ಸುಪರ್ದಿಯಲ್ಲಿತ್ತು. ಮತ್ತೊಂದು ಕೀಲಿಕೈ ಸೇವಕರ ಬಳಿ ಇತ್ತು. ಒಳಗಿನ ಕೋಣೆಯ ಕೀಲಿಕೈ ಕಳೆದಿತ್ತು. ಇಂದು ಅದನ್ನು ತೆರೆದ ಬಳಿಕ ಸೀಲ್ ಮಾಡಿ ಹೊಸ ಕೀ ಮಾಡಿಸಿ ಅದನ್ನು ಜಿಲ್ಲಾ ಖಜಾನೆಯಲ್ಲಿ ಜಿಲ್ಲಾಧಿಕಾರಿಯ ನಿಗಾದಡಿ ಇಡಲಾಗುವುದು ಎಂದು ಪಾಧೀ ಹೇಳಿದರು.

Share This Article

ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!

ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…

ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!

ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…

ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..

ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…