ರಶ್ಮಿಕಾ ಶಾಂಪೂ ವ್ಯಾಮೋಹ!

Rashmika 4 jan 20
Published on

ಬೆಂಗಳೂರು: ‘ಕೊಡಗಿನ ಕುವರಿ’ ರಶ್ಮಿಕಾ ಮಂದಣ್ಣ ಸದ್ಯ ಕನ್ನಡಕ್ಕಿಂತ ತೆಲುಗಿನಲ್ಲಿ ಹೆಚ್ಚು ಬಿಜಿಯಾಗಿದ್ದಾರೆ. ಅಲ್ಲಿನ ಸಾಲುಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುವ ಅವಕಾಶ ಗಿಟ್ಟಿಸಿಕೊಳ್ಳುತ್ತ, ಅಭಿಮಾನಿಗಳ ಪಾಲಿನ ಫೇವರೆಟ್ ನಟಿ ಎನಿಸಿಕೊಂಡಿದ್ದಾರೆ. ಅದೆಲ್ಲ ಸರಿ, ರಶ್ಮಿಕಾಗೆ ಕಳ್ಳತನ ಮಾಡುವ ಖಯಾಲಿಯೂ ಇದೆ ಎಂದರೆ ನೀವು ನಂಬಲೇಬೇಕು. ಈ ವಿಚಾರವನ್ನು ಸ್ವತಃ ಅವರೇ ಒಪ್ಪಿಕೊಂಡಿದ್ದಾರೆ.

ಹೌದು, ರಶ್ಮಿಕಾಗೆ ಒಳ್ಳೊಳ್ಳೆ ಶಾಂಪೂಗಳನ್ನು ಕಂಡರೆ ಪ್ರೀತಿ. ಅದರಲ್ಲೂ ದೊಡ್ಡದೊಡ್ಡ ಸ್ಟಾರ್ ಹೋಟೆಲ್​ಗಳಲ್ಲಿ ಬಳಕೆ ಮಾಡುವ ಶಾಂಪೂಗಳ ಮೇಲೆ ವಿಪರೀತ ವ್ಯಾಮೋಹವಂತೆ. ಹಾಗೇನಾದರೂ ಶೂಟಿಂಗ್ ವೇಳೆ ಅಲ್ಲಿ ಉಳಿದುಕೊಂಡರೆ, ಇಷ್ಟವಾದ ಶಾಂಪೂವನ್ನು ನೇರವಾಗಿ ಬ್ಯಾಗ್​ಗೆ ಇಳಿಸಿಕೊಂಡು ಮನೆಗೆ ತರುತ್ತಿದ್ದರಂತೆ. ಬರೀ ಶಾಂಪೂ ಅಷ್ಟೇ ಅಲ್ಲ, ಆ ಹೋಟೆಲ್​ನಲ್ಲಿರುವ ತಲೆದಿಂಬಿನ ಹೊದಿಕೆ ಇಷ್ಟವಾದರೆ ಅದನ್ನೂ ಮನೆಗೆ ತರುತ್ತಿದ್ದರಂತೆ. ಈಗ್ಯಾಕೆ ಈ ವಿಷಯ ಬಂತು ಎಂದರೆ, ಇತ್ತೀಚೆಗೆ ಟ್ವಿಟರ್​ನಲ್ಲಿ ಲೈವ್ ಬಂದಿದ್ದ ರಶ್ಮಿಕಾ, ಅಭಿಮಾನಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದರು.

ಲಾಕ್​ಡೌನ್ ಸಂದರ್ಭದಲ್ಲಿ ಕಳೆದ ಕ್ಷಣಗಳು, ಇಷ್ಟದ ಅಡುಗೆ, ಇಷ್ಟದ ಕೆಲಸಗಳು ಸೇರಿದಂತೆ ಹಲವು ವಿಷಯಗಳ ಬಗ್ಗೆ ಅವರು ಮಾತನಾಡಿದರು. ಇನ್ನು, ಐಪಿಎಲ್ ಶುರುವಾದ ಹಿನ್ನೆಲೆಯಲ್ಲಿ ನಿಮಗೆ ಇಷ್ಟವಾದ ತಂಡ ಯಾವುದು ಎಂಬ ಪ್ರಶ್ನೆಯೂ ಎದುರಾಯಿತು. ಆರ್​ಸಿಬಿ ಮತ್ತು ಸನ್​ರೈಸರ್ಸ್ ನಡುವೆ ಯಾವ ತಂಡ ಇಷ್ಟ ಎಂದು ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ, ಬಹಳ ಜಾಣತನದಿಂದ ಉತ್ತರಿಸಿದ ರಶ್ಮಿಕಾ, ತಮಗೆ ನಿರ್ದಿಷ್ಟವಾದ ತಂಡ ಎನ್ನುವುದಕ್ಕಿಂತ ಕ್ರಿಕೆಟ್ ಎಂದರೆ ಬಹಳ ಇಷ್ಟ ಎಂದು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಪ್ರತಿಕ್ರಿಯಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net