ನಟಿ ರಶ್ಮಿಕಾ ಮಂದಣ್ಣಗೆ ಸದ್ಯ ಮುಟ್ಟಿದ್ದೆಲ್ಲ ಚಿನ್ನ ಎಂಬಷ್ಟು ಖುಷಿ. ಬಹುತೇಕ ಚಿತ್ರತಂಡಗಳಿಗೆ ಅದೃಷ್ಟದ ಕೈ ಎನಿಸಿಕೊಂಡಿರುವ ಅವರು, ಬೇರೆ ಬೇರೆ ಚಿತ್ರರಂಗಗಳಲ್ಲಿ ನಟಿಸಿದ ಸಾಲು ಸಾಲು ಸಿನಿಮಾಗಳು ಹಿಟ್ ಲಿಸ್ಟ್ ಸೇರುತ್ತಿವೆ. ಕಳೆದ ಎರಡು ವರ್ಷಗಳಲ್ಲಿ ಅವರು ನಾಲ್ಕು ಚಿತ್ರಗಳಲ್ಲಿ ನಟಿಸಿದ್ದು, ಎಲ್ಲವೂ ಯಶಸ್ಸು ಗಳಿಸಿವೆ. 2023ರಲ್ಲಿ ರಶ್ಮಿಕಾ, ತಮಿಳು ನಟ ವಿಜಯ್ಗೆ ನಾಯಕಿಯಾಗಿ “ವಾರಿಸು’ ಚಿತ್ರದಲ್ಲಿ ನಟಿಸಿದ್ದರು. ಬಾಕ್ಸಾಫಿಸಿನಲ್ಲಿ ಆ ಸಿನಿಮಾ 300 ಕೋಟಿ ರೂ. ಗಳಿಕೆ ಮಾಡಿಕೊಂಡಿತ್ತು. ಅದೇ ವರ್ಷ ಹಿಂದಿಯಲ್ಲಿ ಸಿದ್ಧಾರ್ಥ್ ಮಲ್ಹೋತ್ರಾಗೆ ಜೋಡಿಯಾಗಿ “ಮಿಷನ್ ಮಜ್ನೂ’ ಚಿತ್ರದಲ್ಲಿ ನಟಿಸಿದ್ದರು. ಅದು ನೇರವಾಗಿ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಯಾಗಿತ್ತು. 2023ರ ಅಂತ್ಯಕ್ಕೆ ಬಾಲಿವುಡ್ ಸಿನಿಮಾ “ಅನಿಮಲ್’ನಲ್ಲಿ ರಶ್ಮಿಕಾ ರಣಬೀರ್ ಕಪೂರ್ಗೆ ನಾಯಕಿಯಾಗಿ ನಟಿಸಿದ್ದರು. “ಅರ್ಜುನ್ ರೆಡ್ಡಿ’ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದ ಆ ಸಿನಿಮಾ ಬಾಕ್ಸಾಫಿಸಿನಲ್ಲಿ ಬರೋಬ್ಬರಿ 900 ಕೋಟಿ ರೂ. ಗಳಿಕೆ ಮಾಡಿಕೊಂಡು ಸೂಪರ್ಹಿಟ್ ಎನಿಸಿಕೊಂಡಿತ್ತು.
ಇನ್ನು ಕಳೆದ ಡಿಸೆಂಬರ್ನಲ್ಲಿ ರಶ್ಮಿಕಾ, ಅಲ್ಲು ಅರ್ಜುನ್ ಕಾಂಬಿನೇಷನ್ನ ಹಿಟ್ ಚಿತ್ರ “ಪುಷ್ಪ 1: ದ ರೈಸ್’ನ ಸೀಕ್ವೆಲ್ “ಪುಷ್ಪ 2: ದ ರೂಲ್’ ರಿಲೀಸ್ ಆಗಿ 1800 ಕೋಟಿ ರೂ.ಗೂ ಹೆಚ್ಚು ಕಲೆಕ್ಷನ್ ಮಾಡಿಕೊಂಡು, 2024ರ ಭಾರತದ ಬ್ಲಾಕ್ಬಸ್ಟರ್ ಸಿನಿಮಾ ಎನಿಸಿಕೊಂಡಿದೆ. ಅದರ ಬೆನ್ನಲ್ಲೇ ರಶ್ಮಿಕಾ, ವಿಕ್ಕಿ ಕೌಶಲ್ಗೆ ನಾಯಕಿಯಾಗಿ “ಛಾವಾ’ ಚಿತ್ರದಲ್ಲಿ ನಟಿಸಿದ್ದು, ಕಳೆದ ಶುಕ್ರವಾರ (ೆ. 14) ರಿಲೀಸ್ ಆದ ಈ ಐತಿಹಾಸಿಕ ಚಿತ್ರ ಕೇವಲ ಮೂರು ದಿನಗಳಲ್ಲಿ 200 ಕೋಟಿ ರೂ.ಗೂ ಹೆಚ್ಚು ಗಳಿಕೆ ಮಾಡಿಕೊಂಡು ಬಾಲಿವುಡ್ ಬಾಕ್ಸಾಫಿಸಿನಲ್ಲಿ ಹೊಸ ವರ್ಷದ ಮೊದಲ ಹಿಟ್ ಎನಿಸಿಕೊಂಡಿದೆ. ಹೀಗೆ ಬ್ಯಾಕ್ ಟು ಬ್ಯಾಕ್ ಹ್ಯಾಟ್ರಿಕ್ ಹಿಟ್ಗಳನ್ನು ನೀಡಿರುವ ರಶ್ಮಿಕಾ ಸದ್ಯ ಸ್ವರ್ಗಕ್ಕೆ ಮೂರೇ ಗೇಣು ಎನ್ನುವಷ್ಟು ಖುಷಿಯಲ್ಲಿದ್ದಾರೆ.
ಬಹುಭಾಷೆಗಳಲ್ಲಿ ಬಿಜಿ…
ಹ್ಯಾಟ್ರಿಕ್ ಸಂಭ್ರಮದಲ್ಲಿರುವ ರಶ್ಮಿಕಾ ಕೈಯಲ್ಲಿ ಸದ್ಯ ಆರೇಳು ಚಿತ್ರಗಳಿವೆ. ಸಲ್ಮಾನ್ ಖಾನ್ಗೆ ನಾಯಕಿಯಾಗಿ “ಸಿಕಂದರ್’ ಚಿತ್ರದಲ್ಲಿ ನಟಿಸುತ್ತಿದ್ದು, ಅದು ಮಾ. 28ರಂದು ತೆರೆಗೆ ಬರಲಿದೆ. ಅವರು ತಮಿಳು ನಟ ಧನುಷ್ಗೆ ಜೋಡಿಯಾಗಿ “ಕುಬೇರ’ ಚಿತ್ರದಲ್ಲಿ ನಟಿಸುತ್ತಿದ್ದು, ಜತೆಗೆ “ದ ಗರ್ಲ್್ರೆಂಡ್’, “ಥಮಾ’ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಹಾಗೇ “ಪುಷ್ಪ 3: ದ ರ್ಯಾಂಪೇಜ್’ ಮತ್ತು “ಅನಿಮಲ್ ಪಾರ್ಕ್’ ಸಿನಿಮಾಗಳಲ್ಲೂ ರಶ್ಮಿಕಾ ಅಭಿನಯಿಸಲಿದ್ದಾರೆ.