ಉಡುಪಿಯ ಯುವತಿ ಈಗ ಆಕ್ಸ್‌ಫರ್ಡ್ ವಿವಿ ವಿದ್ಯಾರ್ಥಿ ಸಂಘದ ಅಧ್ಯಕ್ಷೆ! ದಾಖಲೆ ಬರೆದ ಕನ್ನಡತಿ

ರಅಸಹಮ
Published on

ಉಡುಪಿ: ಕರ್ನಾಟಕದ ಉಡುಪಿ ಮೂಲದ ರಶ್ಮಿ ಸಾಮಂತ್​ ಇದೀಗ ವಿಶ್ವದ ಮಟ್ಟದಲ್ಲಿ ಭಾರತದ ಹೆಸರನ್ನು ಎತ್ತಿ ಹಿಡಿದಿದ್ದಾರೆ. ಪ್ರತಿಷ್ಠಿತ ವಿದ್ಯಾಲಯವಾಗಿರುವ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿ ಜಯಭೇರಿ ಬಾರಿಸುವ ಮೂಲಕ ಅಧ್ಯಕ್ಷೆ ಸ್ಥಾನಕ್ಕೇರಿದ್ದಾರೆ.

ರಶ್ಮಿ ಮಣಿಪಾಲದ ವತ್ಸಲಾ ಸಾಮಂತ್ ಹಾಗೂ ದಿನೇಶ್ ಸಾಮಂತ್ ಅವರ ಮಗಳು. ಉಡುಪಿಯಲ್ಲಿ ಆರಂಭಿಕ ಶಿಕ್ಷಣ ಪಡೆದು, ಮಣಿಪಾಲ ಇನ್​ಸ್ಟಿಟ್ಯೂಟ್​ ಆಫ್​ ಟೆಕ್ನಾಲಜಿಯಲ್ಲಿ 2016ರಿಂದ 2020ರವರೆಗೆ ಮೆಕಾನಿಕಲ್ ಎಂಜಿನಿಯರಿಂಗ್ ವ್ಯಾಸಂಗ ಮಾಡಿದ್ದರು. ಅಲ್ಲಿ ವ್ಯಾಸಂಗ ಪೂರ್ತಿಯಾದ ನಂತರ ಇಂಗ್ಲೆಂಡ್​ಗೆ ಹಾರಿದ ಆಕೆ ಆಕ್ಸ್‌ಫರ್ಡ್ ವಿವಿ ಸೇರ್ಪಡೆಗೊಂಡರು.

ಆಕ್ಸ್‌ಫರ್ಡ್ ವಿವಿಯ ಲಿನಾಕ್ರೆ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ಸ್ ವಿಷಯದಲ್ಲಿ ಎಂಎಸ್ಸಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಮಧ್ಯೆ ವಿಶ್ವವಿದ್ಯಾಲಯ ವಿದ್ಯಾರ್ಥಿ ಸಂಘದ ಚುನಾವಣೆ ಬಂದಿದೆ. ಚುನಾವಣೆಯಲ್ಲಿ ಸ್ಪರ್ಧಿಸುವ ನಿರ್ಧಾರ ಮಾಡಿದ ರಶ್ಮಿ, ಕರೊನಾ ಸೋಂಕಿನ ವಿರುದ್ಧ ಸುರಕ್ಷತೆ, ಮಾನಸಿಕ ಆರೋಗ್ಯ, ಪರಿಸರ ಸ್ನೇಹಿ ಕಾಲೇಜು ಕ್ಯಾಂಪಸ್ ನಿರ್ಮಾಣದ ಭರವಸೆಯನ್ನು ಮುಂದಿಟ್ಟುಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ಉತ್ತಮ ಭರವಸೆಗಳನ್ನು ನೀಡಿದ ಕನ್ನಡದ ಕುವರಿಯನ್ನು ವಿದ್ಯಾರ್ಥಿಗಳು ಅಧ್ಯಕ್ಷೆಯನ್ನಾಗಿ ಆಯ್ಕೆ ಮಾಡಿದ್ದಾರೆ.

ಅಂದ ಹಾಗೆ ಈ ವಿದ್ಯಾರ್ಥಿ ಚುನಾವಣೆಯಲ್ಲಿ ನಾಲ್ಕು ಮಂದಿ ಸ್ಪರ್ಧಿಸಿದ್ದರು. ಒಟ್ಟು 3,708 ಮತಗಳ ಚಲಾವಣೆಯಾಗಿದೆ. ಅದರಲ್ಲಿ ರಶ್ಮಿ ಒಬ್ಬರೇ ಬರೋಬ್ಬರಿ 1,966 ಮತಗಳನ್ನು ಪಡೆದಿದ್ದಾರೆ. ಮೂವರು ಸಹಸ್ಪರ್ಧಿಗಳು ಗಳಿಸಿರುವ ಒಟ್ಟು ಮತಗಳಿಗಿಂತ ಹೆಚ್ಚು ಮತವನ್ನು ರಶ್ಮಿ ಪಡೆದು ದಾಖಲೆ ಬರೆದಿದ್ದಾರೆ. ಈವರೆಗೆ ಆಕ್ಸ್​ಫರ್ಡ್​ ವಿವಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸ್ಥಾನಕ್ಕೇರಿದ ಮೊದಲ ಭಾರತೀಯೆ ಎನ್ನುವ ಖ್ಯಾತಿಯೂ ಇವರ ಮುಡಿಗೇರಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net