

ಪುಣೆ: ಆರಂಭಿಕ ಶುಭಮಾನ್ ಗಿಲ್ (63*ರನ್, 49 ಎಸೆತ, 7 ಬೌಂಡರಿ) ಅರ್ಧಶತಕದ ಆಸರೆ ಮತ್ತು ಬೌಲರ್‌ಗಳ ಅಮೋಘ ಬೌಲಿಂಗ್ ದಾಳಿಯ ನೆರವಿನಿಂದ ಗುಜರಾತ್ ಟೈಟಾನ್ಸ್ ತಂಡ ಐಪಿಎಲ್-15ರಲ್ಲಿ ಮೊದಲ ತಂಡವಾಗಿ ಪ್ಲೇಆಫ್ ಪ್ರವೇಶ ಖಚಿತಪಡಿಸಿಕೊಂಡಿದೆ. ಎಂಸಿಎ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ‘ಲೋ ಸ್ಕೋರಿಂಗ್’ ಪಂದ್ಯದಲ್ಲಿ ದಿಟ್ಟ ತಿರುಗೇಟು ನೀಡಿದ ಗುಜರಾತ್ ತಂಡ ಲಖನೌ ಸೂಪರ್‌ಜೈಂಟ್ಸ್ ವಿರುದ್ಧ 62 ರನ್‌ಗಳಿಂದ ಭರ್ಜರಿ ಗೆಲುವು ದಾಖಲಿಸಿತು. ಟೂರ್ನಿಯಲ್ಲಿ 9ನೇ ಗೆಲುವು ದಾಖಲಿಸಿದ ಹಾರ್ದಿಕ್ ಪಾಂಡ್ಯ ಪಡೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಕೆಎಲ್ ರಾಹುಲ್ ಬಳಗ 2ನೇ ಸ್ಥಾನಕ್ಕೆ ಕುಸಿದಿದೆ.
ಬೃಹತ್ ಮೊತ್ತ ಪೇರಿಸುವ ಗುರಿಯೊಂದಿಗೆ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಗುಜರಾತ್ ಟೈಟಾನ್ಸ್ ತಂಡ ಸೂಪರ್‌ಜೈಂಟ್ಸ್ ತಂಡದ ಬೌಲರ್‌ಗಳ ಶಿಸ್ತುಬದ್ಧ ದಾಳಿ ಎದುರು ನಿರೀಕ್ಷಿತ ರೀತಿಯಲ್ಲಿ ಇನಿಂಗ್ಸ್ ಕಟ್ಟಲು ಸಾಧ್ಯವಾಗಲಿಲ್ಲ. ಶುಭಮಾನ್ ಗಿಲ್ ಹೋರಾಟ ಮತ್ತು ರಾಹುಲ್ ತೆವಾಟಿಯಾ (22*ರನ್, 16 ಎಸೆತ, 4 ಬೌಂಡರಿ) ಸ್ಲಾಗ್ ಓವರ್‌ಗಳಲ್ಲಿ ಪ್ರದರ್ಶಿಸಿದ ಬಿರುಸಿನ ಆಟದಿಂದ ಗುಜರಾತ್ ತಂಡ 4 ವಿಕೆಟ್‌ಗೆ 144 ರನ್‌ಗಳ ಸಾಧಾರಣ ಮೊತ್ತಕ್ಕೆ ಸಮಾಧಾನ ಕಂಡಿತು. ಸ್ಫೋಟಕ ಬ್ಯಾಟರ್‌ಗಳಿಂದ ಕೂಡಿದ ಗುಜರಾತ್ ತಂಡ ಸಂಪೂರ್ಣ ಇನಿಂಗ್ಸ್‌ನಲ್ಲಿ ಒಂದೇ ಸಿಕ್ಸರ್ ಸಿಡಿಸಿತು. ಪ್ರತಿಯಾಗಿ ಸ್ಪಿನ್ನರ್‌ಗಳಾದ ರಶೀದ್ ಖಾನ್ (24ಕ್ಕೆ 4), ಆರ್. ಸಾಯಿ ಕಿಶೋರ್ (7ಕ್ಕೆ 2) ಮತ್ತು ವೇಗಿ ಯಶ್ ದಯಾಳ್ (24ಕ್ಕೆ 2) ಮಾರಕ ದಾಳಿಗೆ ದಿಕ್ಕೆಟ್ಟ ಲಖನೌ ತಂಡ 13.5 ಓವರ್‌ಗಳಲ್ಲೇ ಕೇವಲ 82 ರನ್‌ಗಳಿಗೆ ಆಲೌಟ್ ಆಯಿತು.
ಲಖನೌಗೆ ಲಗಾಮು
ಪ್ರಮುಖ ಬ್ಯಾಟರ್‌ಗಳ ಸಂಪೂರ್ಣ ವೈಲ್ಯದಿಂದಾಗಿ ಲಖನೌ ತಂಡ ಸಾಧಾರಣ ಮೊತ್ತದ ಸವಾಲನ್ನೂ ಬೆನ್ನಟ್ಟಲು ವಿಲವಾಯಿತು. ಆರಂಭಿಕರಾದ ಕ್ವಿಂಟನ್ ಡಿಕಾಕ್ (11) ಮತ್ತು ನಾಯಕ ಕೆಎಲ್ ರಾಹುಲ್ (8) ವೇಗಿಗಳಾದ ಯಶ್ ದಯಾಳ್ ಮತ್ತು ಶಮಿಗೆ ವಿಕೆಟ್ ಒಪ್ಪಿಸಿದರು. ಪದಾರ್ಪಣಾ ಪಂದ್ಯವಾಡಿದ ಕರಣ್ ಶರ್ಮ (4) ಕೂಡ ಬೇಗನೆ ಔಟಾದರು. ಇದರಿಂದ ಲಖನೌ ಪವರ್‌ಪ್ಲೇನಲ್ಲಿ 3 ವಿಕೆಟ್‌ಗೆ 37 ರನ್ ಗಳಿಸಲಷ್ಟೇ ಶಕ್ತವಾಯಿತು. ಬಳಿಕ ದೀಪಕ್ ಹೂಡಾ (27) ಒಂದೆಡೆ ಹೋರಾಟಕ್ಕೆ ಮುಂದಾದರೂ ಅವರಿಗೆ ಸಮರ್ಥ ಸಾಥ್ ಸಿಗಲಿಲ್ಲ. ರಶೀದ್-ಕಿಶೋರ್ ಸ್ಪಿನ್ ದಾಳಿಗೆ ಕೃನಾಲ್ ಪಾಂಡ್ಯ (5), ಆಯುಷ್ ಬಡೋನಿ (8), ಸ್ಟೋಯಿನಿಸ್ (2) ಮತ್ತು ಹೋಲ್ಡರ್ (1) ಔಟ್ ಆಗುವುದರೊಂದಿಗೆ ಲಖನೌಗೆ ಸೋಲು ಖಚಿತಗೊಂಡಿತು.
ಗುಜರಾತ್‌ಗೆ ಗಿಲ್ ಆಸರೆ
ಲಖನೌ ಬೌಲರ್‌ಗಳು ಬಿಗಿ ಬೌಲಿಂಗ್ ದಾಳಿಯ ಮೂಲಕ ಗುಜರಾತ್ ತಂಡ ರನ್‌ಗಾಗಿ ಪರದಾಡುವಂತೆ ಮಾಡಿದರು. ಇನಿಂಗ್ಸ್ ಪೂರ್ತಿ ತಂಡಕ್ಕೆ ಆಸರೆಯಾಗಿ ನಿಲ್ಲುವ ಮೂಲಕ ಶುಭಮಾನ್ ಗಿಲ್ ತಂಡದ ಮೊತ್ತವನ್ನು 150ರ ಸನಿಹ ತಲುಪಿಸುವಲ್ಲಿ ಶ್ರಮಿಸಿದರು. ಆರಂಭಿಕ ವೃದ್ಧಿಮಾನ್ ಸಾಹ (5) ಇನಿಂಗ್ಸ್‌ನ 3ನೇ ಓವರ್‌ನಲ್ಲೇ ವೇಗಿ ಮೊಹ್ಸಿನ್ ಖಾನ್‌ಗೆ ವಿಕೆಟ್ ಒಪ್ಪಿಸಿದರು. ವನ್‌ಡೌನ್ ಕ್ರಮಾಂಕದಲ್ಲಿ ಕಣಕ್ಕಿಳಿದ ಮ್ಯಾಥ್ಯೂ ವೇಡ್ (10) ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. ಇದರಿಂದ ಗುಜರಾತ್ ಪವರ್‌ಪ್ಲೇನಲ್ಲಿ 2 ವಿಕೆಟ್‌ಗೆ 35 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ನಂತರದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ (11 ರನ್, 13 ಎಸೆತ) ಮತ್ತು ಡೇವಿಡ್ ಮಿಲ್ಲರ್ (26 ರನ್, 24 ಎಸೆತ, 1 ಬೌಂಡರಿ, 1 ಸಿಕ್ಸರ್) ಶುಭಮಾನ್ ಗಿಲ್‌ಗೆ ಕೆಲಕಾಲ ಬೆಂಬಲವಾಗಿ ನಿಂತರೂ, ರನ್‌ಗತಿಗೆ ಚುರುಕು ಮುಟ್ಟಿಸಲು ವಿಲರಾದರು. ಹಾರ್ದಿಕ್ ಪಾಂಡ್ಯ 13 ಎಸೆತ ಎದುರಿಸಿದರೂ ಒಮ್ಮೆಯೂ ಚೆಂಡನ್ನು ಬೌಂಡರಿ ಗೆರೆ ದಾಟಿಸಲಿಲ್ಲ. 42 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ಗಿಲ್ ಸ್ಲಾಗ್ ಓವರ್‌ಗಳಲ್ಲಿ ರಾಹುಲ್ ತೆವಾಟಿಯಾ ಜತೆಗೂಡಿ ಬಿರುಸಿನ ಆಟವಾಡಿದರು. ಇವರಿಬ್ಬರು ಮುರಿಯದ 5ನೇ ವಿಕೆಟ್‌ಗೆ 24 ಎಸೆತಗಳಲ್ಲಿ 41 ರನ್ ಕಸಿದರು.