

ಬೆಂಗಳೂರು: ಕನ್ನಡದಲ್ಲಿ ನೈಜ ಘಟನೆಗಳನ್ನು ಅಧರಿಸಿದ ಚಿತ್ರಗಳಿಗೇನೂ ಕೊರತೆ ಇಲ್ಲ. ಈಗಾಗಲೇ ಸಾಕಷ್ಟು ನೈಜ ಘಟನೆಗಳನ್ನಾಧರಿಸಿದ ಚಿತ್ರಗಳು ಬಿಡಗುಡೆಯಾಗಿದ್ದು, ಆ ಸಾಲಿಗೆ ರಾಜಕುಮಾರ್ ಅಸ್ಕಿ ನಿರ್ದೇಶನದ 'ರಂಗಸಮುದ್ರ' ಸಹ ಒಂದು.
ಈಗಾಗಲೇ 'ರಂಗಸಮುದ್ರ' ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದೆ. ಎರಡು ದಿನಗಳ ಚಿತ್ರೀಕರಣ ಮಾತ್ರ ಬಾಕಿ ಇದ್ದು, ಅದು ಸಹ ಸದ್ಯದಲ್ಲೇ ಮುಗಿಯಲಿದೆ. ಈ ಮಧ್ಯೆ, ಚಿತ್ರತಂಡದವರು ಪ್ರಚಾರ ಕೆಲಸವನ್ನು ಪ್ರಾರಂಭಿಸಿದ್ದಾರೆ.
ಕರ್ನಾಟಕ ಹಾಗೂ ಮಹಾರಾಷ್ಟ್ರದ ಗಡಿಭಾಗದಲ್ಲಿರುವ ಊರೊಂದರ ಹೆಸರು ರಂಗಸಮುದ್ರ. ಊರಿನ ಹೆಸರೇ ಈಗ ಚಿತ್ರದ ಶೀರ್ಷಿಕೆಯಾಗಿದೆ. 20 ವರ್ಷಗಳ ಹಿಂದೆ ಈ ಊರಿನಲ್ಲಿ ನಡೆದ ಫಟನೆಯೇ ಚಿತ್ರದ ಪ್ರಮುಖ ಕಥಾವಸ್ತು. ರಂಗಾಯಣ ರಘು ಮತ್ತು ಸಂಪತ್ ರಾಜ್ ಪ್ರಧಾನ ಪಾತ್ರದಲ್ಲಿದ್ದು ಇದೇ ಮೊದಲಿಗೆ ಹೊಸ ಆಯಾಮದ ಪಾತ್ರಗಳಲ್ಲಿ ಕಾಣಿಸಿ ಕೊಂಡಿದ್ದಾರೆ. ಜನಪದ ಸೊಗಡಿನ ಪಕ್ಕಾ ದೇಸಿ ಕಥೆ ಈ ಚಿತ್ರದ ಹೆಗ್ಗಳಿಕೆ ಎಂದರೆ ತಪ್ಪಿಲ್ಲ.
ಮೈಸೂರು, ಬಿಜಾಪುರ, ಬೆಂಗಳೂರು ಮುಂತಾದ ಕಡೆ 40 ದಿನಗಳ ಚಿತ್ರೀಕರಣ ಮುಗಿದಿದೆ. ರಘು ಮತ್ತು ಸಂಪತ್ ಜತೆಗೆ, ಕಾರ್ತಿಕ್, ದಿವ್ಯಾಗೌಡ, ಗುರುರಾಜ ಹೊಸಕೋಟೆ, ಮೋಹನ್ ಜುನೇಜ, ಮೂಗು ಸುರೇಶ್, ಮಹೇಂದ್ರ, ಸದಾನಂದ, ಸ್ಕಂದ ತೇಜಸ್ ಮುಂತಾದವರು ಅಭಿನಯಿಸಿದ್ದಾರೆ. ರಾಜಕುಮಾರ್ ಅಸ್ಕಿ ಚಿತ್ರವನ್ನು ನಿರ್ದೇಶಿಸುವುದರ ಜತೆಗೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಸಹ ಬರೆದಿದ್ದಾರೆ. ಹೊಯ್ಸಳ ಕ್ರಿಯೇಷನ್ಸ್ ಲಾಂಛನದಲ್ಲಿ ಹೊಯ್ಸಳ ಕೊಣನೂರು ನಿರ್ಮಿಸುತ್ತಿರುವ ಈ ಚಿತ್ರಕ್ಕೆ ದೇಸಿ ಮೋಹನ್ ಸಂಗೀತ ಸಂಯೋಜಿಸಿದರೆ, ಆರ್ ಗಿರಿ ಛಾಯಾಗ್ರಹಣ ಮಾಡಿದ್ದಾರೆ.