'ನಾನು ರೂಂಗೆ ಬೀಗ ಹಾಕುತ್ತಿದ್ದೆ'; ರಣದೀಪ್ ಹೂಡಾ ಖಿನ್ನತೆಗೆ ಅಕ್ಷಯ್ ಕುಮಾರ್ ಕಾರಣರಾದ್ರಾ..?

akshay
Published on

ನವದೆಹಲಿ: ಬಾಲಿವುಡ್ ನಟ ರಣದೀಪ್ ಹೂಡಾ ಅವರು ಯಾವಾಗಲೂ ಚಲನಚಿತ್ರಗಳಲ್ಲಿ ವಿಭಿನ್ನ ರೀತಿಯ ಪಾತ್ರದಲ್ಲಿ ನಟಿಸಲು ಇಷ್ಟಪಡುವ ನಟರಲ್ಲಿ ಒಬ್ಬರು. ಒಮ್ಮೆ ಅವರು ಚಿತ್ರವೊಂದಕ್ಕಾಗಿ ಮೂರು ವರ್ಷಗಳನ್ನು ಕಳೆದರು. ಆದರೆ ದುರದೃಷ್ಟವಶಾತ್ ಆ ಚಲನಚಿತ್ರವನ್ನು ಬಿಡುಗಡೆ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಅವರು ಖಿನ್ನತೆಗೆ ಒಳಗಾಗಿದ್ದರು. ಇದಕ್ಕೆ ಎಲ್ಲೋ ಒಂದು ಕಡೆ ಅಕ್ಷಯ್ ಕುಮಾರ್ ಕೂಡ ಕಾರಣ!

ರಣದೀಪ್ ಹೂಡಾ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಚಿತ್ರವೊಂದರಿಂದಾಗಿ ಖಿನ್ನತೆಗೆ ಒಳಗಾಗಿದ್ದರು ಎಂದು ಬಹಿರಂಗಪಡಿಸಿದ್ದಾರೆ. ಈ ಚಿತ್ರ ರಾಜ್‌ಕುಮಾರ್ ಸಂತೋಷಿ ಅವರ ' ಬ್ಯಾಟಲ್ ಆಫ್ ಸರಗರ್ಹಿ' ಚಿತ್ರವಾಗಿತ್ತು. ಆದರೆ 'ಕೇಸರಿ' ಚಿತ್ರದಿಂದಾಗಿ 'ಬ್ಯಾಟಲ್ ಆಫ್ ಸರಗರ್ಹಿ' ಬಿಡುಗಡೆಯಾಗಲಿಲ್ಲ. ಆಗ ರಣದೀಪ್ ತೀವ್ರ ಆಘಾತಕ್ಕೊಳಗಾಗಿದ್ದರು.

ರಣದೀಪ್ ಹೂಡಾ ಖಿನ್ನತೆಗೆ ಒಳಗಾಗಿದ್ದು ಏಕೆ?

2016 ರಲ್ಲಿ, ರಾಜ್‌ಕುಮಾರ್ ಸಂತೋಷಿ ' ಬ್ಯಾಟಲ್ ಆಫ್ ಸರಗರ್ಹಿ ' ಚಿತ್ರವನ್ನು ಘೋಷಿಸಿದ್ದರು. ಚಿತ್ರದಲ್ಲಿ ರಣದೀಪ್ ಹೂಡಾ ಮುಖ್ಯ ಭೂಮಿಕೆಯಲ್ಲಿದ್ದರು. ಅವರು ಇಶಾರ್ ಸಿಂಗ್ ಪಾತ್ರವನ್ನು ನಿರ್ವಹಿಸಬೇಕಿತ್ತು. ಚಿತ್ರಕ್ಕಾಗಿ ತಯಾರಿ ನಡೆಸಲು ಮೂರು ವರ್ಷ ತೆಗೆದುಕೊಂಡ ಅವರು ಗಡ್ಡವನ್ನೂ ಬೆಳೆಸಿದರು. ಈ ಪಾತ್ರವನ್ನು ಮಾಡಲು ಹಗಲಿರುಳು ಶ್ರಮಿಸಿದರು, ಆದರೆ ಅಕ್ಷಯ್ ಕುಮಾರ್ ಅವರ ' ಕೇಸರಿ ' ಚಿತ್ರದಿಂದಾಗಿ ಚಿತ್ರವು ಬಿಡುಗಡೆಗೆ ಮುಂಚೆಯೇ ಮಕಾಡೆ ಮಲಗಿತು.

' ಬ್ಯಾಟಲ್ ಆಫ್ ಸರಗರ್ಹಿ ' ಮತ್ತು ' ಕೇಸರಿ ' ಕಥೆಯೂ ಅದೇ ಆಗಿತ್ತು. 'ಕೇಸರಿ' ಅನ್ನು 2018 ರಲ್ಲಿ ಘೋಷಿಸಲಾಯಿತು. ಮಾರ್ಚ್ 2019 ರಲ್ಲಿ ಬಿಡುಗಡೆಯಾಯಿತು. 'ಕೇಸರಿ' ಬಾಕ್ಸ್ ಆಫೀಸ್‌ನಲ್ಲಿ ಹಿಟ್ ಎಂದು ಸಾಬೀತಾಯಿತು. 'ಬ್ಯಾಟಲ್ ಆಫ್ ಸರಾಗರ್ಹಿ' ಕೂಡ 2019 ರಲ್ಲಿ ಬಿಡುಗಡೆಯಾಗಬೇಕಿತ್ತು, ಆದರೆ 'ಕೇಸರಿ' ಚಿತ್ರದಿಂದಾಗಿ ಚಿತ್ರ ಬಿಡುಗಡೆಯಾಗಲಿಲ್ಲ.

Mashable India ಜೊತೆಗಿನ ಸಂವಾದದಲ್ಲಿ, ರಣದೀಪ್ ಹೂಡಾ ಅವರು ಇದರಿಂದ ತುಂಬಾ ಜರ್ಜರಿತರಾಗಿ, ತಮ್ಮ ಕೋಣೆಯಲ್ಲಿ ಬೀಗ ಹಾಕಿಕೊಳ್ಳುತ್ತಿದ್ದೆ ಎಂದು ಬಹಿರಂಗಪಡಿಸಿದರು. ಕತ್ತಲೆಯಲ್ಲಿ ಕಾಲ ಕಳೆಯುತ್ತಿದ್ದರಂತೆ. ನಟನ ಪ್ರಕಾರ, "ಇದರಿಂದ ನಾನು ತುಂಬಾ ಪ್ರಭಾವಿತನಾಗಿದ್ದೆ. ನನ್ನ ಪೋಷಕರು ನನ್ನನ್ನು ಒಂಟಿಯಾಗಿ ಬಿಡುತ್ತಿರಲಿಲ್ಲ. ಅವರು ನನ್ನ ಗಡ್ಡವನ್ನು ಕತ್ತರಿಸಬಹುದೆಂಬ ಭಯದಿಂದ ನಾನು ಕೊಠಡಿಗೆ ಬೀಗ ಹಾಕುತ್ತಿದ್ದೆ'' ಎಂದು ಹೇಳಿದರು. ಗಡ್ಡವನ್ನು ಕತ್ತರಿಸಲು ಸಾಧ್ಯವಾಗದ ಕಾರಣ ಈ ಚಿತ್ರದಿಂದಾಗಿ ಮೂರು ವರ್ಷಗಳ ಕಾಲ ಬೇರೆ ಯಾವುದೇ ಚಿತ್ರಕ್ಕೆ ಸಹಿ ಹಾಕಿಲ್ಲ ಎಂದು ರಣದೀಪ್ ಹೂಡಾ ಹೇಳಿದ್ದಾರೆ. ಶೀಘ್ರದಲ್ಲೇ ನಟ ' ಸ್ವತಂತ್ರ ವೀರ್ ಸಾವರ್ಕರ್ ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಅದರ ಶೂಟಿಂಗ್ ಮುಗಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net