

ಮುಂಬೈ: ಬಾಲಿವುಡ್ನಲ್ಲಿ ದೊಡ್ಡ ಮತ್ತು ಪ್ರಸಿದ್ಧ ಕುಟುಂಬ ‘ಕಪೂರ್ ಕುಟುಂಬ’ಕ್ಕೆ ಸೇರಿದ ಮತ್ತು ರಿಷಿ ಕಪೂರ್-ನೀತು ಕಪೂರ್ ಅವರ ಮಗ ರಣಬೀರ್ ಕಪೂರ್. ಇವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್ಹಿಟ್ ಚಿತ್ರಗಳನ್ನು ನೀಡಿದ್ದಾರೆ. ರಣಬೀರ್ ವೃತ್ತಿ ಬದುಕಿನಲ್ಲಿ ಎಷ್ಟು ಸುದ್ದಿಯಾಗುತ್ತಾರೋ ಅಷ್ಟೇ ವೈಯಕ್ತಿಕ ಜೀವನದಲ್ಲೂ ಸುದ್ದಿಯಾಗಿದ್ದಾರೆ. ಆದರೆ ಅವರು ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಮಾತನಾಡಿರುವುದು ಬಹಳ ಕಡಿಮೆ.
ಇತ್ತೀಚೆಗೆ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ರಣಬೀರ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಮುಕ್ತವಾಗಿ ಮಾತನಾಡಿದ್ದಾರೆ. ವರ್ಷಗಳ ಕಾಲ ದೂರವಾಗಿದ್ದ ತಂದೆಗೆ ಹೇಗೆ ಹತ್ತಿರವಾದರು, ತಂದೆ ರಿಷಿ ಕಪೂರ್ ಇಹಲೋಕ ತ್ಯಜಿಸಬಹುದು ಎಂದು ಆಸ್ಪತ್ರೆಯಲ್ಲಿ ಹೇಳಿದಾಗ ಅವರಿಗೆ ಪ್ಯಾನಿಕ್ ಅಟ್ಯಾಕ್ ಆದ ದಿನವನ್ನು ನೆನಪಿಸಿಕೊಂಡಿದ್ದಾರೆ. ತನ್ನ ತಂದೆ ತೀರಿಕೊಂಡಾಗ ನಾನು ಅಳಲಿಲ್ಲ ಎಂದು ಹೇಳಿದ್ದಾರೆ.
ನಾನು ಬಹಳ ಬೇಗ ಅಳುವುದನ್ನು ನಿಲ್ಲಿಸಿದೆ. ಅಪ್ಪ ಸತ್ತಾಗಲೂ ನಾನು ಅಳಲಿಲ್ಲ. ಇದು ಅವರ ಕೊನೆಯ ರಾತ್ರಿ, ಯಾವಾಗ ಬೇಕಾದರೂ ಇಹಲೋಕ ತ್ಯಜಿಸಬಹುದು ಎಂದು ವೈದ್ಯರು ನನಗೆ ಹೇಳಿದರು. ನಾನು ರೂಮ್ಗೆ ಹೋದೆ ಮತ್ತು ನನಗೆ ಪ್ಯಾನಿಕ್ ಅಟ್ಯಾಕ್ ಆಯಿತು. ನೋವನ್ನು ಹೇಗೆ ಹೇಳಬೇಕೆಂದು ತಿಳಿಯಲಿಲ್ಲ. ತಂದೆಯನ್ನು ಕಳೆದುಕೊಂಡಾಗ ಆದರಿಂದ ಆಗುವ ನಷ್ಟವನ್ನು ಅರ್ಥಮಾಡಿಕೊಳ್ಳಲಾಗಿಲಿಲ್ಲ. ಆ ಸಮಯದಲ್ಲಿ ದುಃಖಿತನಾಗಿದ್ದೆ ಎಂದು ನಾನು ಭಾವಿಸುವುದಿಲ್ಲ ಎಂದು ರಣಬೀರ್ ತಿಳಿಸಿದರು.
ಅವರು ಚಿಕಿತ್ಸೆಯಲ್ಲಿದ್ದಾಗ ನಾವು ನ್ಯೂಯಾರ್ಕ್ನಲ್ಲಿ ಒಂದು ವರ್ಷ ಒಟ್ಟಿಗೆ ಕಳೆದೆವು. ನಾನು ಅವರೊಂದಿಗೆ ಇದ್ದೆ. ನಂತರ ಒಂದು ದಿನ ಇದ್ದಕ್ಕಿದ್ದಂತೆ ಅವರು ಅಳಲು ಪ್ರಾರಂಭಿಸಿದರು. ಅವರು ನನ್ನ ಮುಂದೆ ಎಂದು ಈ ರೀತಿ ದುರ್ಬಲರಾಗಿರಲಿಲ್ಲ. ಇದು ನನಗೆ ತುಂಬಾ ವಿಚಿತ್ರವಾಗಿತ್ತು, ಏಕೆಂದರೆ ಅದನ್ನು ಹೇಗೆ ನಿರ್ವಹಿಸಬೇಕೆಂದು ನನಗೆ ತಿಳಿದಿರಲಿಲ್ಲ. ನಾನು ಅವರಿಗೆ ವಿವರಿಸಬೇಕೇ ಅಥವಾ ಅವರನ್ನು ತಬ್ಬಿಕೊಳ್ಳಬೇಕೇ? ನಿಜವಾಗಿಯೂ ಏನು ಮಾಡಬೇಕು ಎಂದು ತಿಳಿಯಲಿಲ್ಲ. ನಮ್ಮ ನಡುವಿನ ಅಂತರದ ಭಾವನೆಯನ್ನು ಆಗ ನಾನು ಅನುಭವಿಸಿದೆ. ಇವತ್ತಿಗೂ ನಮ್ಮ ನಡುವಿನ ಅಂತರವನ್ನು ಕಡಿಮೆ ಮಾಡುವ ಧೈರ್ಯ ನನ್ನಲ್ಲಿಲ್ಲ ಎಂಬ ಪಾಪಪ್ರಜ್ಞೆ ಕಾಡುತ್ತಿದೆ. ನಾನು ಅವರನ್ನು ತಬ್ಬಿಕೊಳ್ಳಬಹುದಿತ್ತು ಅಥವಾ ಸ್ವಲ್ಪ ಪ್ರೀತಿಯನ್ನು ನೀಡಬಹುದಿತ್ತು, ಆ ತಪ್ಪಿತಸ್ಥ ಭಾವನೆ ಈಗಲು ನನ್ನಲಿದೆ ಎಂದು ಹೇಳಿದರು.
ಪ್ರತಿಯೊಬ್ಬ ವ್ಯಕ್ತಿಯನ್ನು ವಿಶೇಷ ರೀತಿಯಲ್ಲಿ ಬೆಳೆಸಲಾಗುತ್ತದೆ. ನನಗೆ ಜವಾಬ್ದಾರಿಯುತ ವ್ಯಕ್ತಿಯಾಗಿದ್ದೀರಿ ಎಂದು ಹೇಳಿದಾಗ, ಮನಸ್ಸಿನಲ್ಲಿ ವಿವಿಧ ವಿಷಯಗಳು ಓಡಲು ಪ್ರಾರಂಭಿಸುತ್ತವೆ. ಇಂದು ನನಗೆ ತಾಯಿ, ಸಹೋದರಿ, ಹೆಂಡತಿ ಮತ್ತು ಮಗಳು ಇದ್ದಾರೆ. ತಂದೆ ಇಲ್ಲ, ಈಗ ಹಲವಾರು ಜವಾಬ್ದಾರಿಗಳೊಂದಿಗೆ ನನ್ನನ್ನು ನಾನು ದುರ್ಬಲಗೊಳಿಸಿಕೊಳ್ಳಬಹುದೇ? ಇದೆಲ್ಲ ನನಗೆ ಗೊತ್ತಿಲ್ಲ, ಆದರೆ ನಾನು ಎಂದಿಗೂ ದೌರ್ಬಲ್ಯವನ್ನು ತೋರಿಸಿಲ್ಲ ಎಂದು ತಿಳಿಸಿದರು. (ಏಜೆನ್ಸೀಸ್)