

ಬೆಂಗಳೂರು: ನಟಿ ರಮ್ಯಾ ಮತ್ತು ದರ್ಶನ್ ಫ್ಯಾನ್ಸ್ ನಡುವಿನ ಸೋಷಿಯಲ್ ಮೀಡಿಯಾ ಕಮೆಂಟ್ಸ್ ಕಾಳಗ ಮುಂದುವರೆದಿದೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿ ಎಂದು ಹೇಳಿದ್ದ ರಮ್ಯಾ ವಿರುದ್ಧ ದರ್ಶನ್ ಅಭಿಮಾನಿಗಳು ಟ್ರೋಲ್ ಮಾಡಲು ಶುರು ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ರಮ್ಯಾಗೆ ಅಶ್ಲೀಲವಾಗಿ ಕಮೆಂಟ್ ಮಾಡಿ, ಅಸಭ್ಯ ಸಂದೇಶಗಳನ್ನು ಕಳುಹಿಸಿದ್ದರು. ಅಂಥವರಿಗೆ ಕಾನೂನಿನ ಮೂಲಕ ಪಾಠ ಕಲಿಸಲು ರಮ್ಯಾ ಅವರು ಮುಂದಾಗಿದ್ದು, ತಮ್ಮ ವಕೀಲರ ಜೊತೆ ಚರ್ಚಿಸಿ ರಮ್ಯಾ ಅವರು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ನಟಿ ಹಾಗೂ ಮಾಜಿ ಸಂಸದೆ ರಮ್ಯಾ ಅವರು, ತಮಗೆ ಸಾಮಾಜಿಕ ಜಾಲತಾಣದಲ್ಲಿ ಬಂದ ಕೊಲೆ ಮತ್ತು ಅತ್ಯಾಚಾರ ಬೆದರಿಕೆಗಳ ವಿರುದ್ಧ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಬಳಿಕ ಮಾತನಾಡಿದ ರಮ್ಯಾ, ನಾನು ಸುಪ್ರೀಂ ಕೋರ್ಟ್ ಆದೇಶವನ್ನು ಶೇರ್ ಮಾಡಿದ್ದೆ. ಅದಕ್ಕೆ ಪ್ರತಿಯಾಗಿ ತುಂಬಾ ಕೆಟ್ಟದಾಗಿ ಮೆಸೇಜ್ ಹಾಕಿ, ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ. ರೇಣುಕಾಸ್ವಾಮಿ ಬದಲು ನಿಮ್ಮನ್ನು ಕೊಲೆ ಮಾಡ್ಬೇಕಿತ್ತು, ನಿಮ್ಮನ್ನು ಅತ್ಯಾಚಾರ ಮಾಡ್ತೀವಿ ಎಂದೆಲ್ಲಾ ಸಂದೇಶ ಕಳುಹಿಸಿದ್ದಾರೆ. ಸುಮಾರು 43 ಫೇಕ್ ಖಾತೆಗಳ ವಿರುದ್ಧ ದೂರು ಕೊಟ್ಟಿದ್ದೇನೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆತಂಕ ಹೊರಹಾಕಿದ್ದಾರೆ.
(ಏಜೆನ್ಸೀಸ್)