ರಾಮನಗರ ಶಾಸಕನ ವಿಡಿಯೋ ವೈರಲ್

ik
Published on

ರಾಮನಗರ: ಹಾಸನದಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರ ಪೆನ್ ಡ್ರೖೆವ್ ಸದ್ದು ಮಾಡುತ್ತಿರುವ ನಡುವೆಯೇ ರಾಮನಗರ ಕಾಂಗ್ರೆಸ್ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಮಹಿಳೆಯೊಬ್ಬರ ಜತೆಗೆ ವಾಟ್ಸ್ ಆಪ್ ಕಾಲ್ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ರಾಮನಗರದಲ್ಲಿ ಸಂಚಲನ ಮೂಡಿಸಿದೆ. ಇಕ್ಬಾಲ್ ಹುಸೇನ್ ಅವರು ಕಾಂಗ್ರೆಸ್ ಪದಾಧಿಕಾರಿ ಎನ್ನಲಾದ ಮಹಿಳೆಯೊಬ್ಬರ ಜತೆಗಿನ 2 ನಿಮಿಷ 27 ಸೆಕೆಂಡ್​ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಈ ವಿಡಿಯೋವನ್ನು ಸ್ಕ್ರೀನ್ ರೆಕಾರ್ಡರ್ ಮೂಲಕ ರೆಕಾರ್ಡ್ ಮಾಡಲಾಗಿದ್ದು, ಸಂಭಾಷಣೆ ಕೇಳಿಸುವುದಿಲ್ಲ. ಆದರೂ ವಿಡಿಯೋ ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.

ಒಂದೆಡೆ ಕಾಂಗ್ರೆಸ್ ನಾಯಕರು, ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆಂಬ ಆರೋಪ ಮಾಡಿ ಬಿಜೆಪಿ - ಜೆಡಿಎಸ್ ನಾಯಕರ ವಿರುದ್ಧ ಮುಗಿಬಿದ್ದಿರುವ ನಡುವೆಯೇ, ಈ ವಿಡಿಯೋ ಬಹಿರಂಗವಾಗಿದೆ. ಅಲ್ಲದೆ, ವಿಡಿಯೋದಲ್ಲಿ ಇರುವ ಮಹಿಳೆ ಕಾಂಗ್ರೆಸ್ ಪಕ್ಷದ ಜಿಲ್ಲೆಯ ಹಿರಿಯ ನಾಯಕರೊಟ್ಟಿಗೆ ಫೋಟೋ ತೆಗೆಸಿಕೊಂಡಿರುವುದು ಸಹ ಚರ್ಚೆಗೆ ಕಾರಣವಾಗಿದೆ. ವಿಡಿಯೋಗೆ ಸಂಬಂಧಿಸಿದಂತೆ ಯಾವುದೇ ಪೊಲೀಸ್ ದೂರು ದಾಖಲಾಗಿಲ್ಲ.

ಸಿಲುಕಿಸುವ ಪ್ರಯತ್ನ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ನನ್ನದೇ ಎಂದು ಒಪ್ಪಿಕೊಂಡಿರುವ ಶಾಸಕ ಇಕ್ಬಾಲ್ ಹುಸೇನ್, ಯಾರದ್ದೋ ಕೋಪವನ್ನು ತೀರಿಸಿಕೊಳ್ಳಲು ನನ್ನನ್ನು ಸಿಲುಕಿಸುವ ಪ್ರಯತ್ನ ಇದಾಗಿದೆ ಎಂದು ಆರೋಪಿಸಿದ್ದಾರೆ. ಸಮಸ್ಯೆಗಳನ್ನು ಹೇಳಿಕೊಳ್ಳಲು ಹಲವಾರು ಮಂದಿ ಕರೆ ಮಾಡುತ್ತಾರೆ ವಿಡಿಯೋ ಕಾಲ್ ಮಾಡಿ ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತಾರೆ. ಈ ಕರೆ ಸುಮಾರು ಒಂದೂವರೆ ವರ್ಷ ಹಿಂದಿನದು ಎಂದ ಇಕ್ಬಾಲ್ ಹುಸೇನ್, ಹೀಗೆ ಕಾಲ್ ರೆಕಾರ್ಡ್ ಮಾಡಿಕೊಂಡು ಈಗ ನನ್ನ ತೇಜೋವದೆ ಮಾಡಲಾಗುತ್ತಿದೆ. ಇದು ನನಗೆ ಬೇಸರ ತರಿಸಿದೆ ಎಂದರು. ಆದರೆ, ಕಾನೂನು ಕ್ರಮದ ಸಂಬಂಧ ಯಾವುದೇ ಸ್ಪಷ್ಟನೆಯನ್ನು ನೀಡಲಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net