More

    ರಾಮನಗರ ಜಿಲ್ಲೆ ಒಡೆಯಲು ಏಳು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ

    ಬೆಂಗಳೂರು: ರಾಮನಗರ ಜಿಲ್ಲೆಯನ್ನು ಛಿದ್ರ ಮಾಡಲು ಈ ಜನ್ಮವಷ್ಟೇ ಅಲ್ಲ, ಇನ್ನು ಏಳು ಜನ್ಮ ಎತ್ತಿ ಬಂದರೂ ಸಾಧ್ಯವಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

    ಜನರ ಅನುಕೂಲ, ಅನನುಕೂಲಗಳನ್ನು ವೈಜ್ಞಾನಿಕವಾಗಿ ಪರಿಗಣಿಸಿ, ಪರಿಶೀಲಿಸಿ ರಾಮನಗರ ಜಿಲ್ಲೆ ರಚನೆ ಮಾಡಲಾಗಿದೆ. ಈಗ ಜಿಲ್ಲೆ ಒಡೆದು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇವೆ ಎಂದರೆ ಇಡೀ ಜಿಲ್ಲೆಯ ಜನ ತಿರುಗಿಬೀಳುತ್ತಾರೆ ಎಂದು ಡಿಸಿಎಂ ಡಿ.ಕೆ‌. ಶಿವಕುಮಾರ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

    ಬಡವರ ಹೊಟ್ಟೆ ಮೇಲೆ ಒಡೆಯುವ, ಕಂಡೋರ ಭೂಮಿಗೆ ಬೇಲಿ ಹಾಕುವ, ಬೆಟ್ಟಗುಡ್ಡಗಳನ್ನು ಲೂಟಿ ಮಾಡಿ ವಿದೇಶಗಳಿಗೆ ಸಾಗಿಸಿ ಹಣ ಮಾಡಿಕೊಳ್ಳುವ, ಅದಕ್ಕೆ ಅಡ್ಡ ಬಂದವರ ಜೀವ ತೆಗೆಯುವ ‘ದುಷ್ಟ’ಪ್ರಜ್ಞೆ, ‘ಅತಿ’ ಬುದ್ಧಿವಂತಿಕೆ, ‘ಅಸಾಮಾನ್ಯ’ ಜ್ಞಾನ ಖಂಡಿತವಾಗಿಯೂ ನನಗಿಲ್ಲ. ಅದು ನನಗೆ ಬೇಕಾಗಿಯೂ ಇಲ್ಲ ಎಂದು ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ.
    ಚಿನ್ನದ ಬೆಲೆಯ ಕನಕಪುರದ ಭೂಮಿಗಳನ್ನು ಕೊಳ್ಳೆ ಹೊಡೆದು ಬಿಲ್ಡರುಗಳಿಗೆ ಒಪ್ಪಿಸುವುದೇ? ಅಥವಾ ತಾವು ಈಗಾಗಲೇ ಎಗ್ಗಿಲ್ಲದೆ ಬೇಲಿ ಹಾಕಿಕೊಂಡಿರುವ ಬೇನಾಮಿ ಭೂಮಿಗಳಲ್ಲಿ ಕೋಟೆ ಕಟ್ಟಿಕೊಳ್ಳುವುದು ನಿಮ್ಮ ತಂತ್ರವೆ? ಬಿಡಿಸಿ ಹೇಳಿದರೆ ನಾವು ಕೃತಾರ್ಥರಾಗುತ್ತೇವೆ. ಇವರು ಹೇಳಲ್ಲ, ಜನರೂ ನಂಬಲ್ಲ.. ಎಲ್ಲವೂ ನಿಗೂಢ ಎಂದು ಲೇವಡಿ ಮಾಡಿದ್ದಾರೆ.
    ಚಿಕ್ಕಬಳ್ಳಾಪುರ, ಚಾಮರಾಜನಗರ, ಯಾದಗಿರಿ, ಕೊಪ್ಪಳ, ಗದಗ ಸೇರಿ ಅನೇಕ ಹೊಸ ಜಿಲ್ಲೆಗಳು ರಚನೆ ಆಗಿವೆ. ಅವೆಲ್ಲವನ್ನೂ ಸುಖಾಸುಮ್ಮನೆ ಮಾಡಲಾಯಿತೆ? ಜನಹಿತ ಪರಿಗಣಿಸಿ ಹೊಸ ಜಿಲ್ಲೆಗಳನ್ನು ರಚಿಸಲಾಯಿತು. ಅಲ್ಲಿ ಜಿಲ್ಲೆಗಳನ್ನು ರಚನೆ ಮಾಡಿದ ಮುಖ್ಯಮಂತ್ರಿಯ ಸ್ವಹಿತ ಇರಲಿಲ್ಲ. ಕನಕಪುರವನ್ನು ಬೆಂಗಳೂರಿಗೆ ಸೇರಿಸಬೇಕೆನ್ನುವುದರ ಹಿಂದೆ ಯಾರ ಹಿತ ಅಡಗಿದೆ? ಕನಕಪುರದ ಪ್ರತಿಯೊಬ್ಬರಿಗೂ ಅಸಲಿ ಸತ್ಯ ಗೊತ್ತಿದೆ. ಇರುವ ಶ್ರೀಮಂತಿಕೆ, ಸಂಪತ್ತು ಸಾಲದೆ? ಇನ್ನೆಷ್ಟನ್ನು ಕೂಡಿ ಹಾಕಬೇಕು?
    ಎಂದು ಕೆಣಕಿದ್ದಾರೆ.

    ಕನಕಪುರದ ಅಭಿವೃದ್ಧಿ ಈಗ ನೆನಪಾಗಿದೆಯಾ? 1983ಕ್ಕೆ ಮೊದಲು ಇದೇ ಕನಕಪುರ, ಸಾತನೂರು ಹೇಗಿದ್ದವು? ರಾಮಕೃಷ್ಣ ಹೆಗಡೆ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲು ಬಂದ ದೇವೇಗೌಡರಿಗೆ, ಅಲ್ಲಿನ ಸ್ಥಿತಿ ಕಂಡು ಕಣ್ಣೀರು ಬಂತು. ಒಂದು ವಿದ್ಯುತ್‌ ಸಂಪರ್ಕ ಇರಲಿಲ್ಲ, ರಸ್ತೆ-ಚರಂಡಿ ಇರಲಿಲ್ಲ. ಕುಡಿಯಲು ನೀರು ಇರಲಿಲ್ಲ. ಆ ಪರಿಸ್ಥಿತಿಯನ್ನು ದೇವೇಗೌಡರು ಈಗಲೂ ನೆನಪು ಮಾಡಿಕೊಳ್ಳುತ್ತಾರೆ. ಅಂದು ಲೋಕೋಪಯೋಗಿ, ಬೃಹತ್‌ ನೀರಾವರಿ ಮಂತ್ರಿಗಳಾಗಿದ್ದ ಅವರು ಕನಕಪುರ, ರಾಮನಗರಕ್ಕೆ ಕಾಯಕಲ್ಪ ನೀಡಿದರು, ಆ ದುಸ್ಥಿತಿಯನ್ನು ಬದಲಿಸಿದರು. ಅವರ ಕೆಲಸವನ್ನೇ ನಾನೂ ಮುಂದುವರಿಸಿದೆ. ನೀವೇನು ಮಾಡಿದ್ದೀರಿ ಡಿ.ಕೆ.ಶಿವಕುಮಾರ್‌ ರವರೇ..? ಬಡವರ ಜಮೀನಿಗೆ ಬೇಲಿ ಹಾಕಿದ್ದು, ಅಡ್ಡ ಬಂದವರ ಜೀವ ತೆಗೆದದ್ದು, ಕಲ್ಲುಬಂಡೆಗಳನ್ನು ಲೂಟಿ ಮಾಡಿದ್ದು, ಕನಕಪುರದಲ್ಲಿ ದಾದಾಗಿರಿ, ಗೂಂಡಾಗಿರಿ ಮಾಡಿದ್ದು. ಈಗ ಕನಕಪುರವನ್ನು ಬೆಂಗಳೂರಿಗೆ ಸೇರಿಸಿ ಇನ್ನೊಂದು ಮಾಫಿಯಾ ಕಟ್ಟುವುದಾ? ಇದಾ ನಿಮ್ಮ ತಲೆಯಲ್ಲಿ ಇರುವ ಆಲೋಚನೆ? ಎಂದು ಆಕ್ರೋಶ ಹೊರ ಹಾಕಿದ್ದಾರೆ.ನಾ

    ನಾಡಪ್ರಭು ಕೆಂಪೇಗೌಡರು, ಕೆಂಗಲ್‌ ಹನುಮಂತಯ್ಯನವರು, ಶಿವಕುಮಾರ ಮಹಾಸ್ವಾಮೀಜಿಗಳು, ಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ರಾಮನಗರದವರು ಎಂದು ನಿಮಗೆ ಈಗ ಜ್ಞಾನೋದಯ ಆಗಿದೆ. ಇಂಥ ಮಹಾಪುರುಷರು ಜನ್ಮತಳೆದ, ಅವರು ನಡೆದಾಡಿದ ನೆಲವನ್ನು ʼರಿಯಲ್‌ ಎಸ್ಟೇಟ್‌ ಪಾಪಕುಂಡʼವನ್ನಾಗಿ ಮಾಡಿದ್ದು ಯಾರಪ್ಪ ಡಿ.ಕೆ.ಶಿವಕುಮಾರ್?‌ ಈ ಪುಣ್ಯಪರುಷರ ಹೆಸರು ಹೇಳುವ ನೈತಿಕತೆ ನಿಮಗೆ ಇದೆಯಾ? ರಾಮದೇವರ ಬೆಟ್ಟದಲ್ಲಿ ನೆಲೆಸಿರುವ ಶ್ರೀರಾಮಚಂದ್ರ ಪ್ರಭು ನಿಮ್ಮ ದುಷ್ಟ ಹುನ್ನಾರವನ್ನು ಮೆಚ್ಚುತ್ಯಾನೆಯೇ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts