ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ರಮೇಶ್ ಪವಾರ್ ಹೊಸ ಕೋಚ್

powar web
Published on

ನವದೆಹಲಿ: ಮಾಜಿ ಸ್ಪಿನ್ನರ್ ರಮೇಶ್ ಪವಾರ್ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಹೊಸ ಮುಖ್ಯ ಕೋಚ್ ಆಗಿ ಬಿಸಿಸಿಐನಿಂದ ಗುರುವಾರ ನೇಮಕಗೊಂಡಿದ್ದಾರೆ. ಕಳೆದ 2 ವರ್ಷಗಳಿಂದ ಈ ಹುದ್ದೆಯಲ್ಲಿದ್ದ ಡಬ್ಲ್ಯುವಿ ರಾಮನ್ ಉತ್ತರಾಧಿಕಾರಿಯಾಗಿ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) 42 ವರ್ಷದ ಪವಾರ್ ಹೆಸರನ್ನು ಶಿಫಾರಸು ಮಾಡಿತ್ತು. ಡಬ್ಲ್ಯುವಿ ರಾಮನ್‌ಗೆ ಮುನ್ನ ಪವಾರ್ ಅವರೇ ಈ ಹುದ್ದೆಯಲ್ಲಿದ್ದರು.

ಮಹಿಳಾ ತಂಡದ ಕೋಚ್ ಹುದ್ದೆಗೆ ಮದನ್ ಲಾಲ್ ನೇತೃತ್ವದ ಸಿಎಸಿ ಒಟ್ಟು 8 ಅಭ್ಯರ್ಥಿಗಳನ್ನು ಆನ್‌ಲೈನ್ ಮೂಲಕ ಸಂದರ್ಶನ ಮಾಡಿದೆ. ಡಬ್ಲ್ಯುವಿ ರಾಮನ್ ಮತ್ತು ರಮೇಶ್ ಪವಾರ್ ಸಹಿತ ನಾಲ್ವರು ಪುರುಷ ಅಭ್ಯರ್ಥಿಗಳು ಬುಧವಾರ ಸಂದರ್ಶನ ಎದುರಿಸಿದ್ದರೆ, ಕನ್ನಡತಿ ಮಮತಾ ಮಾಬೆನ್ ಸಹಿತ ನಾಲ್ವರು ಮಹಿಳಾ ಅಭ್ಯರ್ಥಿಗಳು ಗುರುವಾರ ಸಂದರ್ಶನಕ್ಕೆ ಹಾಜರಾಗಿದ್ದರು. ಹುದ್ದೆಗೆ ಒಟ್ಟು 35 ಅರ್ಜಿಗಳು ಬಂದಿದ್ದವು ಎಂದು ಬಿಸಿಸಿಐ ತಿಳಿಸಿದೆ.

ಮುಂದಿನ ವರ್ಷ ನ್ಯೂಜಿಲೆಂಡ್‌ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಸಜ್ಜುಗೊಳಿಸುವುದು ಪವಾರ್ ಮುಂದಿರುವ ಪ್ರಮುಖ ಸವಾಲಾಗಿದೆ. ಜೂನ್ 16ರಿಂದ ನಡೆಯಲಿರುವ ಇಂಗ್ಲೆಂಡ್ ಪ್ರವಾಸ ಅವರಿಗೆ ಮೊದಲ ಸರಣಿಯಾಗಿರಲಿದೆ. ಈ ವೇಳೆ ಮಹಿಳಾ ತಂಡ 7 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಆಡಲಿದೆ. ವಿಶ್ವಕಪ್‌ಗೆ ಮುನ್ನ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸವನ್ನೂ ಕೈಗೊಳ್ಳಲಿದೆ.

ರಾಮನ್ ಮಾರ್ಗದರ್ಶನದಲ್ಲಿ ಭಾರತ ತಂಡ 2020ರ ಟಿ20 ವಿಶ್ವಕಪ್ ಫೈನಲ್‌ಗೇರಿತ್ತು. ಆದರೆ ಕಳೆದ ಮಾರ್ಚ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲಿ ಏಕದಿನ, ಟಿ20 ಸರಣಿ ಸೋತಿದ್ದು ಅವರಿಗೆ ಹುದ್ದೆ ಕೈತಪ್ಪಲು ಕಾರಣವಾಗಿದೆ ಎನ್ನಲಾಗಿದೆ. ಅಜಯ್ ರಾತ್ರಾ, ಹೃಷಿಕೇಶ್ ಕಾನಿಟ್ಕರ್, ಹೇಮಲತಾ ಕಲಾ, ದೇವಿಕಾ ಮತ್ತು ಸುಮನ್ ಶರ್ಮ ಹುದ್ದೆಯ ರೇಸ್‌ನಲ್ಲಿದ್ದ ಇತರರು.

ಮಿಥಾಲಿ ಜತೆ ಕೆಲಸಕ್ಕೆ ಸಿದ್ಧ

2018ರಲ್ಲಿ ರಮೇಶ್ ಪವಾರ್, ಏಕದಿನ ತಂಡದ ನಾಯಕಿ ಮಿಥಾಲಿ ರಾಜ್ ಜತೆಗಿನ ಭಿನ್ನಮತದಿಂದ ಹುದ್ದೆ ಕಳೆದುಕೊಂಡಿದ್ದರು. ಟಿ20 ವಿಶ್ವಕಪ್‌ನಲ್ಲಿ ಸೆಮೀಸ್ ಪಂದ್ಯದಿಂದ ಮಿಥಾಲಿಯನ್ನು ಪವಾರ್ ಕೈಬಿಟ್ಟಿದ್ದರು. ಇದರ ಬೆನ್ನಲ್ಲೇ ಮಿಥಾಲಿ ಬಿಸಿಸಿಐಗೆ ಪತ್ರ ಬರೆದು, ಪವಾರ್ ತಮ್ಮ ವೃತ್ತಿಜೀವನ ಹಾಳು ಮತ್ತು ಅವಮಾನ ಮಾಡುತ್ತಿದ್ದಾರೆ ಎಂದು ದೂರಿದ್ದರು. ಮಿಥಾಲಿ ತಂಡದಲ್ಲಿ ಕಲಹ ಸೃಷ್ಟಿಸುತ್ತಿದ್ದಾರೆ ಎಂದೂ ಪವಾರ್ ಪ್ರತಿದೂರು ನೀಡಿದ್ದರು. ಆದರೆ ಇದೀಗ ಮತ್ತೆ ಅವರ ಜತೆ ಕಾರ್ಯನಿರ್ವಹಿಸಲು ಸಿದ್ಧ ಎಂದಿದ್ದಾರೆ ಎಂದು ಸಿಎಸಿ ಮುಖ್ಯಸ್ಥ ಮದನ್ ಲಾಲ್ ತಿಳಿಸಿದ್ದಾರೆ. ತಂಡದ ಬಗ್ಗೆ ಸ್ಪಷ್ಟವಾದ ಯೋಜನೆ ಹೊಂದಿದ್ದು ಪವಾರ್ ಆಯ್ಕೆಗೆ ನೆರವಾಯಿತು ಎಂದೂ ಹೇಳಿದ್ದಾರೆ.

ಯಾರೀ ರಮೇಶ್ ಪವಾರ್?

ಮುಂಬೈನವರಾದ ರಮೇಶ್ ಪವಾರ್ ಭಾರತ ಪರ 2 ಟೆಸ್ಟ್ ಮತ್ತು 31 ಏಕದಿನ ಪಂದ್ಯ ಆಡಿದ ಅನುಭವ ಹೊಂದಿದ್ದು, 2018ರಲ್ಲಿ ಜುಲೈ-ನವೆಂಬರ್‌ನಲ್ಲಿ ಮೊದಲ ಬಾರಿಗೆ ಮಹಿಳಾ ತಂಡದ ಕೋಚ್ ಆಗಿದ್ದರು. ಆಗ ಅವರ ಮಾರ್ಗದರ್ಶನದಲ್ಲಿ ಭಾರತ ತಂಡ ಸತತ 14 ಟಿ20 ಪಂದ್ಯ ಜಯಿಸಿತ್ತು ಮತ್ತು 2018ರ ಟಿ20 ವಿಶ್ವಕಪ್‌ಗೂ ಅರ್ಹತೆ ಸಂಪಾದಿಸಿತ್ತು. ಇತ್ತೀಚೆಗೆ ಮುಂಬೈ ಪುರುಷರ ತಂಡ ಅವರ ಮಾರ್ಗದರ್ಶನದಲ್ಲೇ ವಿಜಯ್ ಹಜಾರೆ ಟ್ರೋಫಿ ಜಯಿಸಿತ್ತು. ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲೂ ಅವರು ಬೌಲಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದರು.

*ಭಾರತೀಯ ಮಹಿಳಾ ಕ್ರಿಕೆಟ್‌ಅನ್ನು ಮುಂಚೂಣಿಗೆ ಕೊಂಡೊಯ್ಯುವುದನ್ನು ಎದುರು ನೋಡುತ್ತಿರುವೆ. ಈ ಅವಕಾಶಕ್ಕಾಗಿ ಸಿಎಸಿ ಮತ್ತು ಬಿಸಿಸಿಐಗೆ ಅಪಾರ ಧನ್ಯವಾದಗಳು.

| ರಮೇಶ್ ಪವಾರ್, ಮಹಿಳಾ ತಂಡದ ಹೊಸ ಕೋಚ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net