ಜಾರಕಿಹೊಳಿ ರಾಜೀನಾಮೆ ಬೆನ್ನಲ್ಲೇ ಗೋಕಾಕ್​ ಬಂದ್​! ಸೀಮೆಎಣ್ಣೆ ಸುರಿದುಕೊಂಡು ಆಕ್ರೋಶ

ramesh-jarakiholi gokak protest
Published on

ಬೆಳಗಾವಿ: ಸಚಿವ ಸ್ಥಾನಕ್ಕೆ ರಮೇಶ್ ಜಾರಕಿಹೊಳಿ ರಾಜೀನಾಮೆ ನೀಡಿದ ಬೆನ್ನಲ್ಲೇ ಸಾಹುಕರ್​ನ ಸ್ವಕ್ಷೇತ್ರದಲ್ಲಿ ಆಕ್ರೋಶ ಭುಗಿಲೆದ್ದಿದೆ. ಅಯ್ಯೋಯ್ಯೋ ಅನ್ಯಾಯ... ಎಂದು ಕೂಗಾಡುತ್ತ ಬಸವೇಶ್ವರ ವೃತ್ತದಲ್ಲಿ ಹೈಡ್ರಾಮ ಮಾಡಿದ ರಮೇಶ್​ ಜಾರಕಿಹೊಳಿ ಬೆಂಬಲಿಗರು ಮೈಮೇಲೆ ಸೀಮೆಎಣ್ಣೆ ಸುರಿದುಕೊಂಡು ಪ್ರತಿಭಟನೆ ಮಾಡಿದ್ದಾರೆ.

ರಮೇಶ್​ ಜಾರಕಿಹೊಳಿ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ರಾಜ್ಯ ರಾಜಕೀಯದಲ್ಲಿ ಅಲ್ಲೋಲ-ಕಲ್ಲೋಲ ಸೃಷ್ಟಿಯಾಗಿತ್ತು. ಅಲ್ಲದೆ ರಾಜ್ಯ ಸರ್ಕಾರಕ್ಕೂ ಮುಜುಗರ ಉಂಟಾಗಿದ್ದು, ವಿಪಕ್ಷಗಳಿಂದಲೂ ರಾಜೀನಾಮೆ ಪಡೆಯುವಂತೆ ಆಗ್ರಹ ಕೇಳಿಬಂದಿತ್ತು. ಹಲವೆಡೆ ಕಾಂಗ್ರೆಸ್​-ಜೆಡಿಎಸ್​ ಕಾರ್ಯಕರ್ತರು ಪ್ರತ್ಯೇಕವಾಗಿ ಬೀದಿಗಿಳಿದು ಜಾರಕಿಹೊಳಿ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಅಲ್ಲದೆ ಸಚಿವ ಸ್ಥಾನಕ್ಕೆ ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಇತ್ತ ನಾನು ಯಾವ ತಪ್ಪನ್ನೂ ಮಾಡಿಲ್ಲ, ನಾನೇಕೆ ರಾಜೀನಾಮೆ ಕೊಡಲಿ ಎಂದು ಜಾರಕಿಹೊಳಿ ಹೇಳಿದ್ದರು. ಈ ಎಲ್ಲ ಬೆಳವಣಿಗೆ ನಡುವೆ ರಾಜೀನಾಮೆ ಪಡೆಯಬೇಕೆಂದು ಸಿಎಂ ಯಡಿಯೂರಪ್ಪಗೆ ಪಕ್ಷದ ಹೈಕಮಾಂಡ್​ ಸೂಚಿಸಿತ್ತು. ಇದರ ಬೆನ್ನಲ್ಲೇ ರಮೇಶ್​ ಜಾರಕಿಹೊಳಿ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್​ ಸಿಡಿ ಪ್ರಕರಣದಲ್ಲಿ ಬಂಡಾಯ ಕೈವಾಡ? ಶಿವರಾಮ್​ ಹೆಬ್ಬಾರ್​ ಹೇಳಿದ್ದೇನು?

ಗೋಕಾಕ್​ನ ಸಾಹುಕಾರ್​ ರಾಜೀನಾಮೆ ನೀಡಿರುವ ಸುದ್ದಿ ತಿಳಿಯುತ್ತಿದ್ದಂತೆ ಅವರ ಬೆಂಬಲಿಗರು ಪ್ರತಿಭಟನೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕರಿಸಬಾರದು ಎಂದು ಆಗ್ರಹಿಸಿ ಡಿಆರ್ ವ್ಯಾನ್ ಮುಂದೆ ನಿಂತು ವಾಹನ ಹೋಗೋಕೂ ಬಿಡದೆ ಹೈಡ್ರಾಮ ಮಾಡಿದರು. ಬೆಂಬಲಿಗರು ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಪ್ರತಿಭಟನೆಗೆ ಕುಳಿತರು. ಈ ವೇಳೆ ಕೆಲವರನ್ನ ಪೊಲೀಸರು ವಶಕ್ಕೆ ಪಡೆದರು. ಟೈಯರ್​ಗೆ ಬೆಂಕಿ ಇಟ್ಟು ಯಾವುದೇ ಕಾರಣಕ್ಕೂ ರಾಜೀನಾಮೆ ಅಂಗೀಕಾರ ಮಾಡಬಾರದು ಎಂದು ಯಡಿಯೂರಪ್ಪರನ್ನ ಆಗ್ರಹಿಸಿದರು.

ಸಚಿವ ಸ್ಥಾನಕ್ಕೆ ರಮೇಶ್ ರಾಜೀನಾಮೆ ಬೆನ್ನಲ್ಲೇ ಗೋಕಾಕ್​ ಪಟ್ಟಣ ಬಂದ್ ಮಾಡಲು ಜಾರಕಿಹೊಳಿ ಬೆಂಬಲಿಗರು ಮುಂದಾಗಿದ್ದು, ಗೋಕಾಕ್​ನ ಬೀದಿ ಬೀದಿಗಳಲ್ಲಿ ತಿರುಗಾಡಿ ಅಂಗಡಿ ಬಂದ್ ಮಾಡಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net