

ಬೆಂಗಳೂರು: ರಮೇಶ್ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಕೈವಾಡ ಇದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.
ರಮೇಶ್ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್ ವಿಡಿಯೋ ಸ್ಫೋಟಗೊಂಡ ಮರುದಿನವೇ ಗೋಕಾಕ್ ಸಾಹುಕಾರ್ ಅವರು ಬಿಎಸ್ವೈ ಸಚಿವ ಸಂಪುಟದಿಂದ ಔಟ್ ಆಗಿದ್ದಾರೆ. ಜಾರಕಿಹೊಳಿ ರಾಜೀನಾಮೆ ಕೊಟ್ಟ ಬೆನ್ನಲ್ಲೇ ಸ್ವಕ್ಷೇತ್ರ ಗೋಗಾಕ್ನಲ್ಲಿ ಪರಿಸ್ಥಿತಿ ಉದ್ವಿಗ್ನಗೊಂಡಿದೆ. ಅವರ ಬೆಂಬಲಿಗರು ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದು, ಇದೊಂದು ರಾಜಕೀಯ ಷಡ್ಯಂತ್ರ ಎಂದು ಕಿಡಿಕಾರುತ್ತಿದ್ದಾರೆ. ಇಂದು ನಡೆದ ಪ್ರತಿಭಟನೆಯಲ್ಲೂ ಜಾರಕಿಹೊಳಿ ಸಿಡಿ ಕೇಸ್ನಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್ ಹೆಸರು ಪ್ರಸ್ತಾಪವಾಗಿದ್ದು, ಮತ್ತಷ್ಟು ಚರ್ಚೆಗೆ ಗ್ರಾಸ ಮಾಡಿಕೊಟ್ಟಿದೆ. 'ಅವಳು ಒಂದು ಹೆಣ್ಣು, ಈ ವಿಡಿಯೋ ನೋಡಿ ಅವಳಿಗೆ ನೋವು ಆಗಲ್ವಾ?' ಎಂದು ಹೆಬ್ಬಾಳ್ಕರ್ ವಿರುದ್ಧ ವಾಗ್ದಾಳಿ ನಡೆಸಲಾಗಿದೆ. ಇದನ್ನೂ ಓದಿರಿ ಜಾರಕಿಹೊಳಿ ಸೆಕ್ಸ್ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯ ಎಕ್ಸ್ಕ್ಲೂಸಿವ್ ಮಾಹಿತಿ ಸ್ಫೋಟ
ಇಂದು ಪ್ರತಿಭಟನೆಯಲ್ಲಿ ಮಾತನಾಡಿದ ಬೆಳಗಾವಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕಾರಣಿಯ ಶ್ರೀದೇವಿ ತಡಕೋಳ, ರಮೇಶ್ ಜಾರಕಿಹೊಳಿ ಅವರನ್ನ ಸೋಲಿಸೋಕೆ ಆಗಲ್ಲ ಅಂತ ಹಿಂದಿನ ಬಾಗಿಲಿಂದ ಬಂದು ಈ ಕೈವಾಡ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬಾಳ ಚಂದಾಗಿ ಮಾತಾಡ್ತಾರೆ. ಪ್ರಕರಣದ ತನಿಖೆಯಾದ್ರೆ ಸತ್ಯಾಸತ್ಯತೆ ಹೊರ ಬರುತ್ತೆ. ಅವಳು ಒಂದು ಹೆಣ್ಣು. ಈ ವಿಡಿಯೋ ನೋಡಿ ಅವಳಿಗೆ ನೋವು ಆಗಲ್ವಾ? ಪ್ರತಿಪಕ್ಷದಲ್ಲಿ ಇರಬಹುದು, ಆದ್ರೆ ಈ ವಿಡಿಯೋದಿಂದ ಇಡೀ ಹೆಣ್ಣು ಕುಲಕ್ಕೆ ಅವಮಾನವಾಗಿದೆ ಎಂದು ಆರೋಪಿಸಿದರು. ನಾವು ಯಾವತ್ತಿದ್ದರೂ ರಮೇಶಣ್ಣನ ಜತೆಯಲ್ಲಿ ಇರ್ತೀವಿ. ಅವರು ಮತ್ತೊಮ್ಮೆ ಸಚಿವರಾಗ್ಬೇಕು ಎಂದರು.
ಈ ಆರೋಪ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಸಿಡಿ ವಿಚಾರದಲ್ಲಿ ನಾನೇನು ಮಾತನಾಡಲ್ಲ. ಆ ವಿಚಾರದಲ್ಲಿ ನನ್ನ ಹೆಸರು ಏಕೆ ಎಳೆದು ತರುತ್ತಿದ್ದಾರೆ? ಎಂಬುದು ನಂಗೆ ಗೊತ್ತಿಲ್ಲ. ನಾವು ರಾಜಕಾರಣಿಗಳು ಒಂದು ಮಾದರಿ ಸೆಟ್ ಮಾಡಬೇಕು ಎಂದಷ್ಟೇ ಹೇಳಿದರು.
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ