

ಹೊಸನಗರ: ಮನುಷ್ಯನಲ್ಲಿರುವ ಕಲ್ಮಶಗಳನ್ನು ಶುದ್ಧೀಪಡಿಸಲು ಇರುವ ಆದರ್ಶ ಸಾಧನವೇ ರಾಮಾಯಣ ಎಂದು ನಟ ಹಾಗೂ ನಿರ್ದೇಶಕ ಎಸ್.ನಾರಾಯಣ್ ಹೇಳಿದರು.
ರಾಮಚಂದ್ರಾಪುರ ಮಠದಲ್ಲಿ ಏರ್ಪಡಿಸಿರುವ ಕ್ರೋಧಿನಾಮ ಸಂವತ್ಸರದ ರಾಮೋತ್ಸವದ ಧರ್ಮಸಭೆಯಲ್ಲಿ ಮಂಗಳವಾರ ತಾವು ರಚಿಸಿ ರಾಗ ಸಂಯೋಜಿಸಿರುವ ಅಯ್ಯೋಧ್ಯಾಪತಿ ಪ್ರಭು ಶ್ರೀರಾಮನ ಕುರಿತ ಶ್ರೀರಾಮ ಸಿಂಚನ ಭಕ್ತಿ ಗೀತೆಯ ಧ್ವನಿಸುರುಳಿಯನ್ನು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಲೋಕಾರ್ಪಣೆ ಮಾಡಿಸಿ ಮಾತನಾಡಿದರು.
ರಾಮಾಯಣ ಎನ್ನುವುದು ಬರೀ ಪುಸ್ತಕವಲ್ಲ, ಅದು ಬರೀ ಕತೆಯೂ ಅಲ್ಲ. ಮನುಕುಲದ ಬದುಕಿನ ಬೆಳಕು. ಅದರ ಆದರ್ಶಗಳನ್ನು ಅರಿಯುವ ಸುಯೋಗ ಎಲ್ಲರಿಗೂ ಲಭ್ಯವಾಗುವುದಿಲ್ಲ. ನನ್ನ ತಂದೆ ನನಗೆ ಚಂದಮಾಮನ ತೋರಿಸಿ ಬೆಳೆಸಿಲ್ಲ. ಬದಲಾಗಿ ರಾಮಾಯಣದ ಪುಸ್ತಕ ತೋರಿಸಿ ಬೆಳೆಸಿದ್ದರು. ಬಹುಶಃ ಅಂದು ಸಿಕ್ಕ ಆ ಸಂಸ್ಕಾರದ ಲವಾಗಿ ಇಂದು ಇಂತಹ ಪುಣ್ಯ ಲಭಿಸಿದೆ. ತಿರುಪತಿ ಶ್ರೀನಿವಾಸನ ದರ್ಶನಕ್ಕೆ ಹೋದಾಗ ಶ್ರೀನಿವಾಸ ಕಾಣುವ ಬದಲು ರಾಮನಾಗಿ ಕಂಡ. ಅಂದೇ ಈ ಗೀತೆಗಳನ್ನು ಬರೆದೆ ಎಂದು ತಿಳಿಸಿದರು.
ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತನಾಡಿ, ನಮ್ಮ ದೇಶ, ನಮ್ಮ ಧರ್ಮದ ಕುರಿತು ಅಭಿಮಾನ, ಅದನ್ನು ತಾಯಿಯಾಗಿ ಭಾವಿಸುವ ಭಾವ ಇಲ್ಲದಿದ್ದರೆ ಭಾರತದಲ್ಲಿ ಹುಟ್ಟಿಯೂ ಪ್ರಯೋಜನವಿಲ್ಲ. ಸ್ವತಃ ಶ್ರೀರಾಮ ನಡೆದಾಡಿದ ಪುಣ್ಯ ಭೂಮಿಯಲ್ಲಿ ನಮ್ಮ ಧರ್ಮದ ಕುರಿತು ನಂಬಿಕೆ, ಶ್ರದ್ಧೆಯನ್ನು ಹೊಂದದಿದ್ದರೆ ಹೇಗೆ? ಅಂದು ಸೀತಾ ಮಾತೆಯನ್ನು ರಕ್ಷಿಸುವುದಕ್ಕಾಗಿ ಜಟಾಯು ರಾವಣನನ್ನು ತಡೆದು ಹೋರಾಟ ಮಾಡಿರುವುದು ನಮಗೊಂದು ಉದಾಹರಣೆ. ನಾವೂ ಸಹ ಸೋಲೋ ಅಥವಾ ಸಾವೋ, ನಮ್ಮ ಧರ್ಮ ಮತ್ತು ದೇಶದ ರಕ್ಷಣೆಗಾಗಿ ಹೋರಾಟ ಮಾಡಲೇಬೇಕು ಎಂದರು.
ಪೂಗ ಪೂಜೆ:
ಪ್ರಾಂತ್ಯದ ರೈತರು ಬೆಳೆದ ಕೃಷಿ ಉತ್ಪನ್ನಗಳ ರಾಶಿ ಪೂಜೆಯನ್ನು ರಾಘವೇಶ್ವರ ಭಾರತೀ ಶ್ರೀಗಳು ನೆರವೇರಿಸಿದರು. ಉತ್ತಮ ಮಳೆ, ಬೆಳೆ ಮತ್ತು ಬೆಲೆ ಸಿಕ್ಕು ರೈತರ ಬದುಕು ಹಸನಾಗುವಂತೆ ಪ್ರಾರ್ಥಿಸಲಾಯಿತು. ಧಾರ್ಮಿಕ ಕಾರ್ಯಕ್ರಮಗಳು, ಆಚಾರ್ಯ ವನದಲ್ಲಿ ದೀಪಮಾಲಿಕೆ ಅಖಂಡ ಭಜನೆಗೆ ಚಾಲನೆ ನಡೆಯಿತು. ಬೆಂಗಳೂರಿನ ಲಕ್ಷ್ಮೀ ರಾಧಾಕೃಷ್ಣ ಅವರಿಂದ ಭಕ್ತಿಗೀತೆ ಗಾಯನ ಹಾಗೂ ಶಿವಮೊಗ್ಗದ ಗುರುಗುಹ ಸಂಗೀತ ವಿದ್ಯಾಲಯದಿಂದ ಭಕ್ತಿ ಕೀರ್ತನೆ ಹಾಗೂ ಅತಿಥಿ ಕಲಾವಿದರಿಂದ ನಡೆದ ಯಕ್ಷಗಾನ ಮಾರುತಿ ಪ್ರತಾಪ ಗಮನಸೆಳೆಯಿತು.
ಇದೇ ವೇಳೆ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರಿಂದ ಎಸ್.ನಾರಾಯಣ್ ಮತ್ತು ಪ್ರಮೋದ್ ಮುತಾಲಿಕ್ ಆಶೀರ್ವಾದ ಪಡೆದರು. ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಉದಯಶಂಕರ್ ಮಿತ್ತೂರು, ಪ್ರಧಾನ ಮಠದ ವ್ಯವಸ್ಥಾಪಕ ರಾಘವೇಂದ್ರ ಮಧ್ಯಸ್ಥ, ಸಾಗರ ಮಂಡಲದ ಅಧ್ಯಕ್ಷ ಮುರಳಿ, ಮಠದ ನಿರ್ವಹಣಾ ಸಮಿತಿ ಅಧ್ಯಕ್ಷ ಸೀತಾರಾಮ, ಎಂ.ಜಿ.ರಾಮಚಂದ್ರ, ಸತ್ಯನಾರಾಯಣ ಬಾಗಿ, ಅನುರಾಧಾ, ಪಾರ್ವತಿ ಇತರರಿದ್ದರು.