

ಲಾಕ್ಡೌನ್ ಹಿನ್ನೆಲೆಯಲ್ಲಿ ದೂರದರ್ಶನ ವಾಹಿನಿಯಲ್ಲಿ ಹಳೇ ಧಾರಾವಾಹಿಗಳ ಮರುಪ್ರಸಾರ ಕಾರ್ಯ ಶುರುವಾಗಿತ್ತು. ಮೊಟ್ಟ ಮೊದಲಿಗೆ 1987ರಲ್ಲಿ ಪ್ರಸಾರವಾಗಿದ್ದ ರಾಮಾಯಣವನ್ನು ಮರು ಪ್ರಸಾರ ಮಾಡಲಾಗಿತ್ತು. ಆರಂಭದಿಂದಲೂ ಜನಮೆಚ್ಚುಗೆ ಪಡೆದಿದ್ದ ಸೀರಿಯಲ್ ಇದೀಗ ವಿಶ್ವದಾಖಲೆ ಮಾಡಿದೆ ಎಂದರೆ ನೀವು ನಂಬಲೇ ಬೇಕು!
ಹೌದು, ಸ್ವತಃ ಈ ದಾಖಲೆಯ ಬಗ್ಗೆ ದೂರದರ್ಶನ ನ್ಯಾಶನಲ್ ತನ್ನ ಅಧಿಕೃತ ಟ್ವಿಟರ್ ಪುಟದಲ್ಲಿ ಬರೆದುಕೊಂಡಿದೆ. ‘ದೂರದರ್ಶನದಲ್ಲಿ ಮರುಪ್ರಸಾರಗೊಂಡಿದ್ದ ರಾಮಾಯಣ, ವೀಕ್ಷಕರ ಸಂಖ್ಯೆಯ ಅಂಕಿ ಅಂಶದಲ್ಲಿ ಈ ಹಿಂದಿನ ಎಲ್ಲ ದಾಖಲೆಯನ್ನು ಮುರಿದಿದೆ. ವಿಶ್ವದಲ್ಲೇ ಅತೀ ಹೆಚ್ಚು ವೀಕ್ಷಣೆಗೊಳಪಟ್ಟ ಮನರಂಜನಾ ಕಾರ್ಯಕ್ರಮವಾಗಿ ರಾಮಾಯಣ ಹೊರಹೊಮ್ಮಿದೆ. ಏಪ್ರಿಲ್ 16ಕ್ಕೆ 7.7 ಕೋಟಿ ಜನರು ರಾಮಾಯಣ ಕಣ್ತುಂಬಿಕೊಂಡಿದ್ದಾರೆ’ ಎಂದು ಪೋಸ್ಟ್ ಮಾಡಲಾಗಿದೆ.
1987ರಲ್ಲಿ ಪ್ರಸಾರವಾಗಿದ್ದ ಈ ಧಾರಾವಾಹಿಯನ್ನು ಮರುಪ್ರಸಾರ ಮಾಡುವಂತೆ ಜಾಲತಾಣದಲ್ಲಿ ಬೇಡಿಕೆ ಇಡಲಾಗಿತ್ತು. ಅದನ್ನರಿತ ದೂರದರ್ಶನ ಪ್ರಸಾರ ಆರಂಭಿಸಿತ್ತು. ಇದೀಗ ದಾಖಲೆ ಮಾಡುವ ಮಟ್ಟಿಗೆ ಈ ಸೀರಿಯಲ್ ಅನ್ನು ಜನ ವೀಕ್ಷಿಸುತ್ತಿದ್ದಾರೆ. ರಾಮನಾಗಿ ಅರುಣ್ ಗೋವಿಲ್, ಸೀತೆಯಾಗಿ ದೀಪಿಕಾ ಚಿಕಲಿಯಾ ನಟಿಸಿದ್ದಾರೆ. (ಏಜೆನ್ಸೀಸ್)