

ಚನ್ನಪಟ್ಟಣ
ಬಿಜೆಪಿ ಸರ್ಕಾರದ ಕಮಿಷನ್ ಕಾಟದಿಂದಾಗಿ ರಾಜ್ಯದ ಎಷ್ಟೋ ಕುಟುಂಬಗಳು ಅನಾಥವಾಯಿತು. ನಿಮಗೆ ಬರಬೇಕಾದ ಕಮಿಷನ್ ನೀಡುತ್ತೇವೆ. ಆದರೆ, ಕಳೆದುಕೊಂಡ ಮಾಂಗಲ್ಯ ಮರಳಿ ಕೊಡುತ್ತೀರಾ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಬಿಜೆಪಿ ರಾಜ್ಯಾಧ್ಯರನ್ನು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಪ್ರಶ್ನಿಸಿದರು.
ತಾಲೂಕಿನ ಕೆಂಗಲ್ ಬಳಿ ಭಾನುವಾರ ನಡೆದ ಕಾಂಗ್ರೆಸ್ ಗ್ಯಾರಂಟಿ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದಲ್ಲಿ 40% ಸರ್ಕಾರ ಇದೆ. ಸಿಎಂ ಹೋದ ಕಡೆಯೆಲ್ಲ 40% ಸಿಎಂ ಎಂಬ ಹಣೆಪಟ್ಟಿ ಅಂಟಿಕೊಳ್ಳುತ್ತಿದೆ. ಕರ್ನಾಟಕ ಸಿಎಂ ಪೇಸಿಎಂ ಎಂದು ಖ್ಯಾತರಾಗಿರುವುದು ಮೋದಿಗೆ ನಾಚಿಕೆ ತರಬೇಕು. ರಾಜ್ಯದಲ್ಲಿರುವುದು 40% ಸರ್ಕಾರ ಎಂದು ನಾವು ಹೇಳುತ್ತಿಲ್ಲ, ರಾಜ್ಯದ ಗುತ್ತಿಗೆದಾರರ ಸಂದವರೇ ಹೇಳಿದ್ದಾರೆ. ಈ ಮಧ್ಯೆ ಪ್ರಧಾನಿಗಳು ರಾಜ್ಯಕ್ಕೆ 8 ಬಾರಿ ಬಂದರು ಸಹ ಇದರ ಬಗ್ಗೆ ಚಕಾರ ಎತ್ತಲಿಲ್ಲ. ಗುತ್ತಿಗೆದಾರರ ಪತ್ರಕ್ಕೆ ಉತ್ತರ ಕೊಡಲಿಲ್ಲ ಎಂದು ಟೀಕಿಸಿದರು.
ರಾಜ್ಯ ಸರ್ಕಾರದ ಕಮಿಷನ್ ಕಾಟಕ್ಕೆ ಅವರದೇ ಪಕ್ಷದ ಕಾರ್ಯಕರ್ತನೊಬ್ಬ ಬಲಿಯಾದ. ಇನ್ನು ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿದ ಸುರ್ಜೇವಾಲಾ, ಕೇವಲ ಕಾರ್ಯಕರ್ತನೊಬ್ಬನೇ ಅಲ್ಲ ರಾಜ್ಯದ ಹಲವರು ಬಿಜೆಪಿ ಸರ್ಕಾರದ ಕಮಿಷನ್ ಕಾಟಕ್ಕೆ ಬಲಿಯಾಗಿದ್ದಾರೆ. ಶಾಲೆ ಅನುದಾನಕ್ಕೆ ಕಮಿಷನ್ ಇರಲಿ, ಇದೀಗ ಮಠದ ಅನುದಾನಕ್ಕೂ ಕಮಿಷನ್ ಕೇಳುತ್ತಿದ್ದಾರೆ ಎಂದು ಸ್ವಾಮೀಜಿಯೋಬ್ಬರೇ ಆರೋಪಿಸಿದ್ದಾರೆ. ರಾಜ್ಯದ ಮಂತ್ರಿಗಳು ಸೇರಿ 17 ಶಾಸಕರ ವಿರುದ್ಧ ಕಮೀಷನ್ ಆರೋಪವಿದೆ. ಆದರೆ, ಯಾರ ವಿರುದ್ದವೂ ಕ್ರಮವಿಲ್ಲ ಎಂದರು.
ವರ್ಗಾವಣೆ ಸೇರಿ ಯಾವುದರಲ್ಲೂ ಬಿಜೆಪಿ ಸರ್ಕಾರ ಕಮಿಷನ್ ಬಿಡುತ್ತಿಲ್ಲ. ಇದೀಗ, ಸೋಪ್ ಕಾರ್ಖಾನೆಯನ್ನು ತೊಳೆಯಲು ನಿಂತಿದ್ದಾರೆ. 20 ರೂ. ಸಾಬೂನಿನಲ್ಲಿ ಇಷ್ಟು ಹಗರಣ ಮಾಡಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ಧ ಇಷ್ಟೆಲ್ಲ ಆರೋಪಗಳಿದ್ದರೂ ಅಮಿತ್ ಶಾ ಸಾಕ್ಷಿ ಕೇಳುತ್ತಾರೆ. ಜನ ಒಗ್ಗಟ್ಟಾಗದಿದ್ದರೆ ಬಿಜೆಪಿಯವರು ರಾಜ್ಯವನ್ನೇ ಮಾರುತ್ತಾರೆ ಎಂದು ಕುಟುಕಿದರು. ರಾಜ್ಯದಲ್ಲಿ ಇನ್ನೊಂದು ಪಕ್ಷವಿದೆ. ಅದು ಬಿಜೆಪಿ ತೊಡೆ ಮೇಲೆ ಇಷ್ಟ ಬಂದಾಗ ಕೂರುತ್ತದೆ. ಅದು ಬಿಜೆಪಿ ಬಿ ಟೀಂ ಅಲ್ಲ. ಎ ಟು ಝಡ್ ಟೀಂ. ಕಾಲಕ್ಕೆ ತಕ್ಕಂತೆ ಬದಲಾಗುವ ಪಕ್ಷ. ಜೆಡಿಎಸ್ ಬೆಂಬಲಿಸಿದರೆ ಮತ್ತೆ ಬಿಜೆಪಿಗೆ ಅಧಿಕಾರ ನೀಡಿದಂತೆ ಎಂದು ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಎಂದಿಗೂ ಜನಪರ
ನೆಹರು ಕಾಲದಿಂದಲೂ ಬಡವರು, ಮಹಿಳೆಯರನ್ನು ಗಮನದಲ್ಲಿಟ್ಡುಕೊಂಡು ಕಾರ್ಯಕ್ರಮ ನೀಡುವುದು ಕಾಂಗ್ರೆಸ್ ಪಕ್ಷ ಮಾತ್ರ. ಮತಕ್ಕಾಗಿ ಎಂದೂ ಕಾರ್ಯಕ್ರಮ ನೀಡುವುದಿಲ್ಲ. ಜನರ ಹಿತಕ್ಕಾಗಿ ಕಾರ್ಯಕ್ರಮ ನೀಡುತ್ತೇವೆ. ಜನಸಾಮಾನ್ಯರ ಅಭಿವೃದ್ಧಿಯೇ ಕಾಂಗ್ರೆಸ್ ಪಕ್ಷದ ಧ್ಯೇಯ. ಅದರ ಭಾಗವೇ ಕಾಂಗ್ರೆಸ್ನ ಗ್ಯಾರಂಟಿ ಯೋಜನೆಗಳು. 450 ರೂ. ಇದ್ದ ಗ್ಯಾಸ್ ಬೆಲೆ ಇಂದು 2200 ರೂ. ಆಗಿದೆ. ರೈತಪರ, ಬಡವರ ಪರ ಎನ್ನುವವರು ಯಾರು ಸಹ ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಸಂಸದ ಟಿ.ಕೆ. ಸುರೇಶ್ ಟೀಕಿಸಿದರು.
ರಾಜ್ಯದಲ್ಲಿ ಚುನಾವಣೆ ಹತ್ತಿರವಾಗುತ್ತಿದೆ. ಬಿಜೆಪಿ, ಜೆಡಿಎಸ್ ಎರಡೂ ಪಕ್ಷಗಳು ಪ್ರಚಾರಕ್ಕೆ ಹೊರಟಿವೆ. ಜೆಡಿಎಸ್ ಪಂಚರತ್ನ ಯಾತ್ರೆ ಮಾಡುತ್ತಿದ್ದರೆ, ಬಿಜೆಪಿಯವರು ವಿಜಯಸಂಕಲ್ಪ ಯಾತ್ರೆ ಮೂಲಕ 40% ಸರ್ಕಾರ ಕೊಡುವುದಾಗಿ ಹೊರಟಿದ್ದಾರೆ. ಆದರೆ, ಜನರಿಗೆ ಉತ್ತಮ ಕಾರ್ಯಕ್ರಮ ನೀಡಬೇಕು ಎಂದು ಕಾಂಗ್ರೆಸ್ ಪ್ರಜಾಧ್ವನಿ ನಡೆಸುತ್ತಿದೆ ಎಂದರು.
ಜಿಲ್ಲೆಯ ಜನತೆ ಕೆಂಗಲ್ ಹನುಮಂತಯ್ಯ, ದೇವೇಗೌಡ, ಕುಮಾರಸ್ವಾಮಿ ಸೇರಿದಂತೆ ಹಲವರಿಗೆ ಸಿಎಂ ಸ್ಥಾನ ಕೊಡಿಸಿದ್ದೀರಿ. ಈ ಬಾರಿ ನಾಲ್ಕೂ ಸ್ಥಾನ ಗೆಲ್ಲಿಸುವ ಮೂಲಕ ಡಿ.ಕೆ. ಶಿವಕುಮಾರ್ ಅವರನ್ನು ಬೆಂಬಲಿಸಬೇಕು ಎಂದು ಡಿ.ಕೆ. ಸುರೇಶ್ ಮನವಿ ಮಾಡಿದರು.