ಹಣಕ್ಕೆ ಬೇಡಿಕೆ ಇಟ್ಟರೆ ಅಮಾನತು ಜನಸಂಪರ್ಕ ಸಭೆಯಲ್ಲಿ ಅಧಿಕಾರಿಗಳಿಗೆ ಬಾಲಕೃಷ್ಣ ಎಚ್ಚರಿಕೆ

11 RMN-MGD P1
Published on

ಮಾಗಡಿ

ಜನಸ್ನೇಹಿ ಆಡಳಿತ ನೀಡಲು ಬದ್ದ ಎಂದು ಶಾಸಕ ಎಚ್.ಸಿ.ಬಾಲಕೃಷ್ಣ ಹೇಳಿದರು.

ತಾಲೂಕು ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜನಸಂಪರ್ಕ ಸಭೆಯಲ್ಲಿ ಮಾತನಾಡಿ, ಅಧಿಕಾರಿಗಳು ನಾಗರಿಕರಿಂದ ಸಮಸ್ಯೆ ಬಗ್ಗೆ ಅರ್ಜಿ ಪಡೆದ ನಂತರ ಸ್ಥಳಕ್ಕೆ ಭೇಟಿ ನೀಡಿ ದಾಖಲೆ ಸರಿಪಡಿಸಿಕೊಡಬೇಕು. ಸುಮ್ಮನೆ ಕಚೇರಿಗಳಿಗೆ ಅಲೆದಾಡಿಸಬಾರದು. ಜನರು ಕೂಡ ತಮ್ಮ ಕೆಲಸ ಮಾಡಿಸಿಕೊಳ್ಳಲು ಯಾರಿಗೂ ನಯಾ ಪೈಸೆ ನೀಡಬಾರದು. ಹಣಕ್ಕೆ ಬೇಡಿಕೆ ಇಡುವವರ ಹೆಸರು ತಿಳಿಸಿದರೆ ಅಂತಹವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಜನಸಂಪರ್ಕ ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸಬೇಕು. ಸಭೆ ಅಥವಾ ಇನ್ನಾವುದೇ ಸಬೂಬು ಹೇಳಿ ಗೈರಾಗಬಾರದು ಹಾಗೂ ಬೇರೆಯವರನ್ನು ಕಳಿಸಬಾರದು. ಸಭೆಗೆ ಸಮಸ್ಯೆ ಹೊತ್ತು ಬರುವವರಿಗೆ ಅಧಿಕಾರಿಗಳಿಂದಲೇ ಉತ್ತರ ಕೊಡಿಸುವುದು ನನ್ನ ಉದ್ದೇಶವಾಗಿದೆ ಎಂದರು.

ಇಂದಿನ ಸಭೆಯಲ್ಲಿ ಜನರು ನೀಡಿರುವ ಅರ್ಜಿಗಳಿಗೆ ಮುಂದಿನ ಸಭೆಯಲ್ಲಿ ಉತ್ತರ ನೀಡದಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡಲಾಗುವುದು ಎಂದು ಶಾಸಕ ಬಾಲಕೃಷ್ಣ ಎಚ್ಚರಿಕೆ ನೀಡಿದರು. ಹಾಗೂ ಫಾರ್ಮ್ ನಂ. 50, 53ರಡಿ ಸಾಗುವಳಿ ಚೀಟಿಗೆ ಅರ್ಜಿ ಸಲ್ಲಿಸಿರುವ ಅರ್ಹ ಫಲಾನುಭವಿಗಳಿಗೆ ಮುಂದಿನ ಸಭೆಯ ಒಳಗೆ ಖಾತೆಯೊಂದಿಗೆ ಸಾಗುವಳಿ ಚೀಟಿ ವಿತರಿಸಬೇಕು ಎಂದು ಬಾಲಕೃಷ್ಣ ತಾಕೀತು ಮಾಡಿದರು.

ಹೊಸಪಾಳ್ಯ ವ್ಯಾಪ್ತಿಯ ರೈತರ ಪಹಣಿಯಲ್ಲಿ ಅಧಿಕಾರಿಗಳು ಮತ್ತಾರದೋ ಹೆಸರು ದಾಖಲು ಮಾಡಿರುವುದರಿಂದ ತಿದ್ದುಪಡಿ ಮಾಡಿಸಲು ಅಲೆದಾಡುವಂತಾಗಿದೆ. ಅಧಿಕಾರಿಗಳು ಕೆಲಸ ಮಾಡಿಕೊಡಲು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ರೈತರು ಶಾಸಕರ ಗಮನಕ್ಕೆ ತಂದರು. ಈ ವೇಳೆ ಕೆಂಡಾಮಂಡಲರಾದ ಶಾಸಕರು, ಕೂಡಲೇ ಪಹಣಿ ಸರಿಪಡಿಸಿಕೊಡದಿದ್ದರೆ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಜಿ. ಸುರೇಂದ್ರಮೂರ್ತಿ, ತಾಪಂ ಇಒ ಚಂದ್ರು, ಉಪ ತಹಸೀಲ್ದಾರ್ ರಶ್ಮಿ, ಕೃಷಿ ಇಲಾಖೆ ವಿಜಯ ಸವಣೂರು, ತೋಟಗಾರಿಕೆ ಸಂತೋಷ್, ಟಿಎಚ್‌ಒ ಡಾ. ಎಂ.ಸಿ. ಚಂದ್ರಶೇಖರ್, ದಿಶಾ ಸಮಿತಿ ಸದಸ್ಯ ಜೆ.ಪಿ.ಚಂದ್ರೇಗೌಡ ಮುಂತಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net