ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಒಟ್ಟು 1029 ಕೋಟಿ ರೂ.ವ್ಯವಹಾರ

mng-7oct-jairaj b rai
Published on


ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಕಾರ್ಯಾಚರಿಸುತ್ತಿರುವ ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2024-25ನೇ ಸಾಲಿನ ವಿತ್ತೀಯ ವರ್ಷದ ಅರ್ಧ ವಾರ್ಷಿಕ ಅವಧಿಗೆ ಒಟ್ಟು 548 ಕೋಟಿ ರೂ. ಠೇವಣಿ, 481 ಕೋಟಿ ರೂ.ಸಾಲ ಹಾಗೂ 1029 ಕೋಟಿ ರೂ.ವ್ಯವಹಾರ ಹೊಂದಿದೆ. ಮಾರ್ಚ್ 2024ರಿಂದ ಒಟ್ಟು ವ್ಯವಹಾರದಲ್ಲಿ 43 ಕೋಟಿ ರೂ.ಹೆಚ್ಚಳ ಸಾಧಿಸಿದೆ.
2024ರ ಸೆ.30ಕ್ಕೆ ನಿವ್ವಳ ಲಾಭವು 4.61 ಕೋಟಿ ರೂ.ದಾಖಲಿಸಿದ್ದು, ಇದು ಕಳೆದ ವರ್ಷಕ್ಕಿಂತ 1.17 ಕೋಟಿ ರೂ.ಹೆಚ್ಚಳವಾಗಿ ಶೇ.34 ವೃದ್ಧಿಯಾಗ್ತಿದೆ. 2023-24ನೇ ಸಾಲಿನಲ್ಲಿ ಸಂಘವು ತನ್ನ ಸದಸ್ಯರಿಗೆ ಶೇ.25 ಡಿವಿಡೆಂಡ್ ನೀಡಿದೆ. ಸ್ಥಾಪನೆಯ ವರ್ಷದಿಂದ ನಿರಂತರ ಡಿವಿಡೆಂಡ್ ನೀಡುತ್ತಾ ಬಂದಿದ್ದು, ಕಳೆದ ಆರು ವರ್ಷಗಳಿಂದ ಗರಿಷ್ಟ ಶೇ.25 ಡಿವಿಡೆಂಡ್ ನೀಡುತ್ತಿದೆ.
2024ರ ಸೆ.30ಕ್ಕೆ ಸಂಘದ ಒಟ್ಟು ಅನುತ್ಪಾದಕ ಆಸ್ತಿ 30 ಲಕ್ಷ ರೂ. ಮಾತ್ರ ಇದ್ದು, ಇದು ಹೊರಬಾಕಿ ಸಾಲದ ಶೇ. 0.06ಕ್ಕೆ ಸೀಮಿತವಾಗಿದೆ. ಸಂಘದಲ್ಲಿ ನಿವ್ವಳ ಅನುತ್ಪಾದಕ ಆಸ್ತಿಯು ಕಳೆದ 17 ವರ್ಷಗಳಿಂದ ಶೂನ್ಯ ಪ್ರಮಾಣದಲ್ಲಿದ್ದು, ಸಾಲ ವಸೂಲಾತಿಯು ಉತ್ತಮವಾಗಿದೆ.
1000 ಕೋಟಿ ರೂ.ಮೀರಿದ ಒಟ್ಟು ವ್ಯವಹಾರ ದಾಖಲಿಸಿದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಕ್ರೆಡಿಟ್ ಸಹಕಾರ ಸಂಘವಾಗಿ ಮೂಡಿಬಂದಿರುವುದು ಸಂಘದ ಸಾಧನೆಯ ವಿಶೇಷತೆ ಆಗಿದೆ. ಸಂಘದ ನಿರಂತರ ಪ್ರಗತಿಗೆ ಸಹಕರಿಸುತ್ತಿರುವ ಸಂಘದ ಆಡಳಿತ ಮಂಡಳಿ ಸದಸ್ಯರುಗಳಿಗೆ, ಶಾಖಾ ಸಲಹಾ ಸಮಿತಿ ಅಧ್ಯಕ್ಷರುಗಳಿಗೆ ಹಾಗೂ ಸದಸ್ಯರುಗಳಿಗೆ, ಸಂಘದ ಸರ್ವ ಸದಸ್ಯ ಬಾಂಧವರಿಗೆ ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಜೈರಾಜ್ ಬಿ.ರೈ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net