

ಉಡುಪಿ: ಜಿಲ್ಲೆಯ ವಿವಿಧ ದೇವಸ್ಥಾನ ಮತ್ತು ಭಜನಾಮಂದಿರದಲ್ಲಿ ರಾಮನವಮಿ ಉತ್ಸವವನ್ನು ಭಾನುವಾರ ವೈಭವದಿಂದ ಆಚರಿಸಲಾಯಿತು.
ಸಾಲಿಗ್ರಾಮ ಶ್ರೀರಾಮ ಸೇವಾ ಸಮಿತಿಯ ಶ್ರೀರಾಮ ಮಂದಿರದಲ್ಲಿ 35ನೇ ವರ್ಷದ ರಾಮ ನವಮಿ ಮಹೋತ್ಸವದಲ್ಲಿ ಬೆಳಗ್ಗೆ ಸುಂದರಕಾಂಡ ಪಾರಾಯಣ, ಸಾಯಂಕಾಲ ವಿಷ್ಣು ಸಹಸ್ರನಾಮ, ಶ್ರೀರಾಮ ರಕ್ಷಾಸ್ತೋತ್ರ, ಭಗವತ್ಗೀತೆ ಪಾರಾಯಣ, ಸಂಜೆ ವಸಂತ ಪೂಜೆ, ಪನಿವಾರ ವಿತರಣೆ ನಡೆಯಿತು. 6ರಿಂದ ವಿದ್ವಾನ್ ಅಶೋಕ ಆಚಾರ್ಯ ಮತ್ತು ತಂಡದವರಿಂದ ಭಜನ್ ಸಂಧ್ಯಾ ನಡೆಯಿತು. ನೂರಾರು ಭಕ್ತರು ಆಗಮಿಸಿ ಶ್ರೀರಾಮಚಂದ್ರನಿಗೆ ವಿಶೇಷ ಪೂಜಾ ಸೇವೆ ಸಲ್ಲಿಸಿದರು.
ಮಲ್ಪೆ ಜಿ.ಎಸ್.ಬಿ ಸಮಾಜ ಶ್ರೀ ರಾಮ ಮಂದಿರ, ಶ್ರೀ ರಾಮ ದೇವರ ಪ್ರತಿಷ್ಠಾಪನೆ ರಜತ ಮೊಹೋತ್ಸವ ಆಚರಣೆ ಹಾಗೂ ಶ್ರೀ ರಾಮ ನವಮಿ ಮಹೋತ್ಸವ ಆಚರಣೆ ನಡೆಯಿತು. ಶ್ರೀರಾಮಚಂದ್ರ ದೇವರಿಗೆ ಪಂಚಾಮೃತ ಅಭಿಷೇಕ, ಶತ ಕಲಶಾಭಿಷೇಕ, ಕನಕಾಭಿಷೆೇಕ, ಗಂಗಾಭಿಷೇಕ , ಪಲಾಭಿಷೆೇಕ ಹಾಗೂ ಸಾನಿಧ್ಯ ಹವನ, ಶ್ರೀದೇವರಿಗೆ ವಿಶೇಷ ಅಲಂಕಾರ ಹಾಗೂ ಶ್ರೀರಾಮ ದೇವರಿಗೆ ತೊಟ್ಟಿಲು ಸೇವೆ, ಭಜನಾ ಕಾರ್ಯಕ್ರಮ, ಪಲ್ಲ ಪೂಜೆ, ಮಹಾ ಪೂಜೆ ಬಳಿಕ ಮಹಾ ಸಮಾರಾಧನೆ ಜರಗಿತು.