ರಾಮ ಮಂದಿರ ಭೂಮಿಪೂಜೆ; ಯಾರಿಗೆಲ್ಲ ಆಹ್ವಾನ? ಕರ್ನಾಟಕದಿಂದ ಭಾಗವಹಿಸುವರೆಷ್ಟು?

Ram Temple
Published on

ನವದೆಹಲಿ: ಅಯೋಧ್ಯೆಯ ರಾಮ ಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕರೊನಾ ಕಾರಣದಿಂದಾಗಿ ಅಂದಾಜು 200 ಜನರಿಗಷ್ಟೇ ಟ್ರಸ್ಟ್​ನಿಂದ ಆಹ್ವಾನ ನೀಡಲಾಗಿದೆ. ಈ ಮೊದಲು 250 ಜನರಿಗೆ ಆಹ್ವಾನಿಸುವ ಉದ್ದೇಶ ಹೊಂದಲಾಗಿತ್ತು.

ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಹೊರತುಪಡಿಸಿ ಬೇರಾವ ರಾಜ್ಯದ ಸಿಎಂಗಳನ್ನು ಆಹ್ವಾನಿಸಲಾಗಿಲ್ಲ. ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್​ ಅತಿಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ.

ಇದರಂತೆ ಆಗಸ್ಟ್​ ಐದರಂದು ಪ್ರಧಾನಿ ಮೋದಿ ಭೂಮಿಪೂಜೆ ನೆರವೇರಿಸಲಿದ್ದಾರೆ. ಲಾಲ್​ಕೃಷ್ಣ ಅಡ್ವಾಣಿ, ಮುರಳಿ ಮನೋಹರ್​ ಜೋಶಿ, ಉಮಾಭಾರತಿ, ವಿನಯ್​ ಕಟಿಯಾರ್​, ಸಾಧ್ವಿ ರಿತಂಬರಾ, ಕಲ್ಯಾಣ್​ ಸಿಂಗ್​, ಜೈಭಾನ್​ ಸಿಂಗ್​ ಪೊವಯ್ಯ, ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಹಾಗೂ ಗೃಹ ಸಚಿವ ಅಮಿತ್​ ಷಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಪ್ರಮುಖರಾಗಿದ್ದಾರೆ.

ಟ್ರಸ್ಟ್​ನ 15 ಸದಸ್ಯರೂ ಇರಲಿದ್ದಾರೆ. ಇದಲ್ಲದೇ, ಆಹ್ವಾನ ನೀಡಲಾಗಿರುವ ಪ್ರಮುಖ ಸ್ವಾಮೀಜಿಗಳೆಂದರೆ, ಶ್ರೀ ಮಹೇಂದ್ರ ನಿತ್ಯ ಗೋಪಾಲ ದಾಸ್​, ಶ್ರೀ ಸ್ವಾಮಿ ಗೋವಿಂದ್​ ದೇವ್​ ಗಿರಿ, ಶ್ರೀ ಚಂಪತ್​ ರೈ ಮೊದಲಾದವರು. ಕರ್ನಾಟಕದಿಂದ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಆಹ್ವಾನಿತರಾಗಿದ್ದಾರೆ. ಆದರೆ, ಶ್ರೀಗಳು ಚಾತುರ್ಮಾಸ್ಯದಲ್ಲಿರುವ ಕಾರಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿಲ್ಲ.

ಇದಲ್ಲದೇ, ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗ್ವತ್​, ವಿಶ್ವ ಹಿಂದು ಪರಿಷದ್​ನ ಅಧ್ಯಕ್ಷ ಅಲೋಕ್​ ಕುಮಾರ್​ ಸೇರಿ ಇವೆರಡೂ ಸಂಘಟನೆಗಳು ಇತರ ಪ್ರಮುಖರಿಗೂ ಆಹ್ವಾನ ನೀಡಲಾಗಿದೆ.

40 ಕೆಜಿ ಬೆಳ್ಳಿ ಗಟ್ಟಿಯನ್ನು ಗರ್ಭಗುಡಿಯ ಆಳದಲ್ಲಿರುವ ಮೂಲಕ ಭೂಮಿ ಪೂಜೆ ನೆರವೇರಿಸಲಾಗುತ್ತದೆ. ಆಗಸ್ಟ್​ 3ರಂದು ದಿನವಿಡೀ ವೈದಿಕ ವಿಧಿ-ವಿಧಾನಗಳು ನಡೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net