

ಅಯೋಧ್ಯೆ: ಉತ್ತರ ಪ್ರದೇಶದ ಅಧ್ಯಾತ್ಮಿಕ ನಗರಿ ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಪ್ರತಿಷ್ಠಾಪಿಸುವ ಸಮಯ ಸಮೀಪಿಸುತ್ತಿದ್ದಂತೆ ಭಯೋತ್ಪಾದಕ ಸಂಘಟನೆಗಳ ಸತತ ಬೆದರಿಕೆಗಳು ಸಂಚಲನ ಮೂಡಿಸುತ್ತಿವೆ. ಖಲಿಸ್ತಾನಿ ಭಯೋತ್ಪಾದಕರ ಗುಂಪುಗಳು, ಪ್ರತ್ಯೇಕತಾವಾದಿ ಗುರುಪತ್ವಂತ್ ಸಿಂಗ್ ಪನ್ನುನ್ ಹತ್ಯೆಗೆ ಪ್ರತತೀಕಾರವಾಗಿ ಅಯೋಧ್ಯೆಯಲ್ಲಿ ವಿನಾಶವನ್ನು ಸೃಷ್ಟಿಸುವುದಾಗಿ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ. ಇದೀಗ ತಾಜಾ ಸುದ್ದಿ ಏನೆಂದರೆ, ಪಾಕಿಸ್ತಾನ ಮೂಲದ ಭಯೋತ್ಪಾದಕ ಗುಂಪು ಜೈಶ್ ಇ ಮೊಹಮ್ಮದ್ ಕೂಡ ಅಯೋಧ್ಯೆಯಲ್ಲಿ ಅವ್ಯವಸ್ಥೆಯನ್ನು ಸೃಷ್ಟಿಸುವುದಾಗಿ ಬೆದರಿಕೆ ಹಾಕಿದೆ.
ಬಾಬರಿ ಮಸೀದಿ ಧ್ವಂಸ ಘಟನೆಗಳನ್ನು ಉಲ್ಲೇಖಿಸಿರುವ ಈ ಭಯೋತ್ಪಾದಕ ಸಂಘಟನೆ, ಅಶಾಂತಿಯ ಪರಿಸ್ಥಿತಿ ಅನಿವಾರ್ಯವಾಗಿದೆ ಎಂದು ಎಚ್ಚರಿಸಿದೆ. ಇದರ ಜತೆಗೆ ಭದ್ರತಾ ಪಡೆಗಳಿಗೆ ಎಚ್ಚರಿಕೆ ನೀಡಲಾಗಿದೆ. ಅಯೋಧ್ಯೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ ಮತ್ತು ಎಲ್ಲಾ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಪ್ತಚರ ಮೂಲಗಳು ಬಹಿರಂಗಪಡಿಸಿವೆ. ಕಳೆದ ವರ್ಷ ಜನವರಿ 26ರಂದು ಕೂಡ ಜೈಶ್ ಇದೇ ರೀತಿಯ ಬೆದರಿಕೆ ಹಾಕಿತ್ತು.
ಅಯೋಧ್ಯೆಯಲ್ಲಿ ಭದ್ರತೆಯ ಮೇಲೆ ನಿರಂತರವಾಗಿ ನಿಗಾ ಇರಿಸಿರುವ ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳ ಇತ್ತೀಚೆಗೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಮೂವರು ಖಲಿಸ್ತಾನಿ ಸಹಾನುಭೂತಿ ಹೊಂದಿರುವವರನ್ನು ಬಂಧಿಸಿದೆ. ಈ ಹಿನ್ನೆಲೆಯಲ್ಲಿ ಪನ್ನು ಸಂಘಟನೆಯವರು ಎನ್ನಲಾದ ವ್ಯಕ್ತಿಗಳು ಶುಕ್ರವಾರ ಎಚ್ಚರಿಕೆ ರವಾನಿಸಿದ್ದಾರೆ.
ರಾಮಲಲ್ಲಾ ಪ್ರಾಣ ಪ್ರತಿಷ್ಠಾ ಕಾರ್ಯಕ್ರಮವನ್ನು ಹಾಳು ಮಾಡುವುದಾಗಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.