ರಾಜ್ಯಪಾಲರಿಂದ ರಕ್ಷಾ ಬಂಧನ ಆಚರಣೆ

41
Published on

ಮೈಸೂರು: ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ್ ಅವರಿಗೆ ಬುಧವಾರ ರಾಖಿ ಕಟ್ಟುವ ಮೂಲಕ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದಿಂದ ರಕ್ಷಾ ಬಂಧನ ಆಚರಿಸಲಾಯಿತು.
ಯಾದವಗಿರಿ ಸೇವಾಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಭಾಗದ ಮುಖ್ಯಸ್ಥೆ ಬಿ.ಕೆ.ಲಕ್ಷ್ಮೀಜಿ ಶ್ರೀರಕ್ಷೆ ನೀಡಿ ಶುಭ ಹಾರೈಸಿದರು.
ವಿಜಯಶಂಕರ್ ಮಾತನಾಡಿ, ರಕ್ಷಾ ಬಂಧನದಲ್ಲಿ ಪಾಲ್ಗೊಂಡಿದ್ದಕ್ಕೆ ಅತೀವ ಸಂತಸವಾಗಿದೆ. ರಾಜಕೀಯ ಜೀವನದ ನೂತನ ಅಧ್ಯಾಯಕ್ಕೆ ಒಮ್ಮನಸ್ಸು ಮತ್ತು ಉತ್ಸಾಹದಿಂದ ಹೃದಯ ತೆರೆದುಕೊಂಡಿದ್ದೇನೆ ಎಂದರು.
60 ಶಾಸಕರಿರುವ ಈ ಪುಟ್ಟರಾಜ್ಯದ ಜನಸಂಖ್ಯೆಯಲ್ಲಿ ಹೆಚ್ಚಿನವರು ಬುಡಕಟ್ಟಿನವರೇ ಇದ್ದು ಸರಳ ಜೀವನ ನಡೆಸುತ್ತಾರೆ. ಅಲ್ಲಿ ನಾನು ಮನಃ ಪೂರ್ತಿಯಾಗಿ ಜನಸೇವೆ ಮಾಡಲು ಸಿದ್ಧನಿದ್ದು, ತಮ್ಮೆಲ್ಲರ ಆಶೀರ್ವಾದ ಅಗತ್ಯವಿದೆ ಎಂದು ಹೇಳಿದರು.
ನಾನು ಸಾರ್ವಜನಿಕ ಕ್ಷೇತ್ರದಲ್ಲಿ ಕರ್ನಾಟಕ ರಾಜ್ಯದ ಮಂತ್ರಿಯಾಗಿ, ಸಂಸದ- ಶಾಸಕನಾಗಿ ಪಡೆದಿರುವ ಅನುಭವವನ್ನು ಅಲ್ಲಿಯ ಜನರ ಸೇವೆಯಲ್ಲಿ ವಿನಿಯೋಗಿಸಲು ಇಚ್ಛಿಸುತ್ತೇನೆ. ಈ ಬಗ್ಗೆ ಮಾನ್ಯ ಪ್ರಧಾನ ಮಂತ್ರಿಯವರೂ ಕೂಡ ನನಗೆ ಸಲಹೆ ಸೂಚನೆ ನೀಡಿದ್ದು, ಗ್ರಾಮೀಣ ಪ್ರದೇಶಗಳಿಗೆ ತೆರಳಿ ಅವರ ಜತೆಯಲ್ಲಿದ್ದು ಅವರ ಕಷ್ಟ ಸುಖಗಳಲ್ಲಿ ಭಾಗಿಯಾಗಬೇಕು ಎಂದಿದ್ದಾರೆ. ಅಲ್ಲಿಂದ ನಾನು ಹಿಂತಿರುಗಿ ಬರುವಷ್ಟರಲ್ಲಿ ಅವರ ಋಣ ತೀರಿಸುತ್ತೇನೆ. ದೈವ ಮತ್ತು ತಮ್ಮೆಲ್ಲರ ಶುಭ ಹಾರೈಕೆ ನನ್ನೊಟ್ಟಿಗೆ ಇದೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.
ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಬಿ.ಕೆ.ರಂಗನಾಥ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net