

ನವದೆಹಲಿ : ನಿನ್ನೆಯ ರಾಜ್ಯಸಭಾ ಕಲಾಪದ ವೇಳೆಯಲ್ಲಿ ಐಟಿ ಸಚಿವ ಅಶ್ವಿನಿ ವೈಷ್ಣವ್ ಅವರು ಪೆಗಾಸಸ್ ಬಗ್ಗೆ ಹೇಳಿಕೆ ನೀಡಲು ಹೊರಟಾಗ, ಅಹಿತಕರ ಘಟನೆಯೊಂದು ನಡೆಯಿತು. ಸಚಿವರ ಕೈಯಿಂದ ಪತ್ರವನ್ನು ಕಸಿದ ತೃಣಮೂಲ ಕಾಂಗ್ರೆಸ್ ಸಂಸದ ಡಾ.ಶಂತನು ಸೇನ್, ಅದನ್ನು ಹರಿದು, ಕಾಗದದ ತುಂಡುಗಳನ್ನು ಪೀಠಾಸೀನರಾಗಿದ್ದ ಡೆಪ್ಯುಟಿ ಚೇರ್ಮನ್ ಹರಿವಂಶ್ ಎನ್.ಸಿಂಗ್ ಅವರ ಮೇಲಕ್ಕೇ ಚೆಲ್ಲಿದರು.
ಈ ಪ್ರಸಂಗದ ಹಿನ್ನೆಲೆಯಲ್ಲಿ, ರಾಜ್ಯ ಸಂಸದೀಯ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಅವರು ಇಂದು ಡಾ. ಸೇನ್ ಅವರನ್ನು ಸದನದ ಸೇವೆಯಿಂದ ಸಸ್ಪೆಂಡ್ ಮಾಡಬೇಕೆಂಬ ಪ್ರಸ್ತಾಪ ಮಾಡಿದರು. "ರಾಜ್ಯಸಭಾ ಸದಸ್ಯರು ನಡೆದುಕೊಳ್ಳಬೇಕಾದ ರೀತಿಯನ್ನು ಬಿಟ್ಟು, ದುರ್ವರ್ತನೆ ತೋರಿದ್ದಾರೆ" ಎಂದರು. ಕೆಲವೇ ನಿಮಿಷಗಳಲ್ಲಿ ಈ ಪ್ರಸ್ತಾವನೆ ಅಂಗೀಕರಿಸಲ್ಪಟ್ಟು, ಮುಂಗಾರು ಅಧಿವೇಶನದ ಉಳಿದ ಅವಧಿಗೆ ಡಾ.ಸೇನ್ ಅವರು, ಸದನ ಕಲಾಪಗಳಲ್ಲಿ ಭಾಗವಹಿಸದಂತೆ ಸಸ್ಪೆಂಡ್ ಮಾಡಲಾಯಿತು.
ಈ ಹಿನ್ನೆಲೆಯಲ್ಲಿ ಚೇರ್ಮನ್ ಎಂ.ವೆಂಕಯ್ಯ ನಾಯ್ಡು ಅವರು, ಸಂಸದ ಡಾ.ಸೇನ್ ಅವರಿಗೆ "ಸದನ ಬಿಟ್ಟು ಹೋಗಿ" ಎಂದು ಮನವಿ ಮಾಡಿದರು. ತೃಣಮೂಲ ಕಾಂಗ್ರೆಸ್ನ ಇತರ ಸಂಸದರು ಎಬ್ಬಿಸಿದ ಗದ್ದಲದಿಂದಾಗಿ ರಾಜ್ಯಸಭಾ ಕಲಾಪವನ್ನು ಮುಂದೂಡಲಾಯಿತು. (ಏಜೆನ್ಸೀಸ್)