ಟೇಕ್ವಾಂಡೊ ಪ್ರೀಮಿಯರ್​ ಲೀಗ್​ ಗೆದ್ದ ರಾಜಸ್ಥಾನ ರೆಬೆಲ್ಸ್​

tpl web
Published on

ನವದೆಹಲಿ: ರಾಜಸ್ಥಾನ ರಾಯಲ್ಸ್​ ತಂಡ ಚೊಚ್ಚಲ ಆವೃತ್ತಿಯ ಟೇಕ್ವಾಂಡೊ ಪ್ರೀಮಿಯರ್​ ಲೀಗ್​ನಲ್ಲಿ (ಟಿಪಿಎಲ್​) ಚಾಂಪಿಯನ್​ ಪಟ್ಟವೇರಿದೆ. ಭಾನುವಾರ ರಾತ್ರಿ ನಡೆದ ಫೈನಲ್​ ಪಂದ್ಯದಲ್ಲಿ ರಾಜಸ್ಥಾನ ತಂಡ ಡೆಲ್ಲಿ ವಾರಿಯರ್ಸ್​ ವಿರುದ್ಧ 2-1ರಿಂದ ಗೆಲುವು ದಾಖಲಿಸಿತು.

ಕೋಚ್​ ಅಬ್ರಾರ್​ ಖಾನ್​ ಮಾರ್ಗದರ್ಶನದ ರಾಜಸ್ಥಾನ ತಂಡವನ್ನು ಹರಿಯಾಣದ ಸೌರವ್​ ಮುನ್ನಡೆಸಿದರು. ಸೆಮಿಫೈನಲ್​ನಲ್ಲಿ ರಾಜಸ್ಥಾನ ಗುಜರಾತ್​ ಥಂಡರ್ಸ್​ ಎದುರು 2-1ರಿಂದ ಗೆದ್ದರೆ, ಡೆಲ್ಲಿ ತಂಡ ಪಂಜಾಬ್​ ರಾಯಲ್ಸ್​ ವಿರುದ್ಧ 2-1ರಿಂದ ಜಯಿಸಿತು.

ಒಟ್ಟು 12 ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಬೆಂಗಳೂರು ನಿಂಜಾಸ್​ ತಂಡ ಕ್ವಾರ್ಟರ್​​ಫೈನಲ್​ನಲ್ಲಿ ನಿರಾಸೆ ಅನುಭವಿಸಿತು. ಗುಂಪು ಹಂತದಲ್ಲಿ ಉತ್ತಮ ನಿರ್ವಹಣೆ ತೋರಿದ ಬೆಂಗಳೂರು ತಂಡ ನಾಕೌಟ್​ ಪಂದ್ಯದಲ್ಲಿ ಪಂಜಾಬ್​ ರಾಯಲ್ಸ್​ ಎದುರು 1-2ರಿಂದ ಪರಾಭವಗೊಂಡಿತು.

ಐಪಿಎಲ್​ ಮಾದರಿಯ ಟೂರ್ನಿಯಲ್ಲಿ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳು ತಂಡಗಳ ಮಾಲೀಕತ್ವ ಹೊಂದಿದ್ದಾರೆ. ಸದ್ಯದಲ್ಲೇ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಪ್ರತ್ಯೇಕ ಟಿಪಿಎಲ್​ ಆರಂಭಗೊಳ್ಳಲಿದೆ. ಅದಕ್ಕೆ ಮುನ್ನ ಅಂತಾರಾಷ್ಟ್ರೀಯ ಆವೃತ್ತಿಯೂ ಆಯೋಜನೆಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net