ಟಾಲಿವುಡ್​ ನಿದ್ದೆಗೆಡಿಸಿದ ರಾಜಮೌಳಿ ನಿವೃತ್ತಿ ಸುದ್ದಿ ... ರಿಟೈರ್​ಮೆಂಟ್​ ಬಗ್ಗೆ ಬಾಹುಬಲಿ ನಿರ್ದೇಶಕ ಹೇಳಿದ್ದೇನು?

S S Rajamouli Final
Published on

ಲಾಕ್‌ಡೌನ್ ಇದ್ದರೂ ಜ್ಯೂನಿಯರ್ ಎನ್.ಟಿ.ಆರ್ ಮತ್ತು ರಾಮ್‌ಚರಣ್ ತೇಜ ಅಭಿನಯದ ‘ಆರ್‌ಆರ್‌ಆರ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮನೆಯಿಂದಲೇ ಮೇಲ್ವಿಚಾರಣೆ ಮಾಡುತ್ತಿದ್ದಾರೆ ನಿರ್ದೇಶಕ ರಾಜಮೌಳಿ. ಸಾಲದ್ದಕ್ಕೆ ಮಹೇಶ್ ಬಾಬು ಅಭಿನಯದಲ್ಲಿ ಒಂದು ಚಿತ್ರವನ್ನೂ ಅವರು ನಿರ್ದೇಶಿಸುತ್ತಿದ್ದು, ಅದರ ಕೆಲಸಗಳು ಸಹ ಸೈಡ್ ಬೈ ಸೈಡ್ ನಡೆಯುತ್ತಿದೆಂತೆ. ಹೀಗಿರುವಾಗಲೇ, ರಾಜಮೌಳಿ ರಿಟೈರ್ ಆಗುತ್ತಾರೆ, ಚಿತ್ರರಂಗಕ್ಕೆ ಗುಡ್‌ಬೈ ಹೇಳುತ್ತಾರೆ ಎಂಬ ಸುದ್ದಿ ಹಬ್ಬಿಸಿಬಿಟ್ಟಿದ್ದಾರೆ.

ಹೌದು, ‘ಆರ್‌ಆರ್‌ಆರ್’ ನಂತರ ನಿವೃತ್ತಿ ಘೋಷಿಸುತ್ತಾರೆ ಎಂದು ಯಾರೋ ಸುದ್ದಿ ಹಬ್ಬಿಸಿದ್ದಾರೆ. ಇದರಿಂದ ರಾಜಮೌಳಿ ತಲೆ ಬಿಸಿಯಾಗಿದೆ. ಉತ್ತರ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ಇಷ್ಟಕ್ಕೂ ಈ ಸುದ್ದಿ ಹಬ್ಬಿದ್ದು ಹೇಗೆ ಗೊತ್ತಾ? ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡುವಾಗ, ನಲಗೊಂಡ ಜಿಲ್ಲೆಯಲ್ಲಿ ಜಮೀನು ಕೊಂಡುಕೊಂಡಿರುವುದಾಗಿ ರಾಜಮೌಳಿ ಹೇಳಿದ್ದರಂತೆ. ಅಲ್ಲೊಂದು ತೋಟ ಮಾಡಿ, ನಿವೃತ್ತ ಜೀವನವನ್ನು ಅಲ್ಲಿ ಕಳೆಯುವುದಾಗಿ ಹೇಳಿದ್ದಾರಂತೆ. ಅಷ್ಟು ಸಾಕಾಯ್ತು, ಸುದ್ದಿ ಹಬ್ಬೋಕೆ. ರಾಜಮೌಳಿ ಸದ್ಯದಲ್ಲೇ ನಿವೃತ್ತರಾಗಲಿದ್ದಾರೆ, ತೋಟದ ಮನೆಯಲ್ಲಿ ಜೀವನ ಕಳೆಯಲಿದ್ದಾರೆ ಎಂದು ಪುಕಾರಾಗಿಬಿಟ್ಟಿದೆ.

ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯೆ ನೀಡಿರುವ ರಾಜಮೌಳಿ, ಇನ್ನು 10 ವರ್ಷ ನಿವೃತ್ತಿಯ ಯೋಚನೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ‘ಸದ್ಯಕ್ಕೆ ಕೈ ತುಂಬಾ ಕೆಲಸಗಳಿವೆ. ಇನ್ನು 10 ವರ್ಷ ರಿಟೈರ್ ಆಗುವ ಯಾವುದೇ ಯೋಚನೆ ಇಲ್ಲ. ಮಕ್ಕಳು ಜೀವನದಲ್ಲಿ ಸೆಟ್ಲ ಆದ ಮೇಲೆ, ನಾನು ನಿವೃತ್ತನಾಗಿ ನನ್ನ ತೋಟದ ಮನೆ ಸೇರಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.

ಅಲ್ಲಿಗೆ ರಾಜಮೌಳಿ ಅವರ ರಿಟೈರ್‌ಮೆಂಟ್ ವಿಷಯಕ್ಕೆ ಫುಲ್‌ಸ್ಟಾಪ್ ಬಿದ್ದಿದೆ. ಯಾರಾದರೂ ಅಂತಹ ವಿಷಯ ಎತ್ತಿದರೆ, ಅದು ಸುಳ್ಳು ಎಂದು ಹೇಳುವುದನ್ನು ಮರೆಯಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net