ಪೌರಾಣಿಕ ಕತೆ ಸಾರುವ ದಸರಾ ಬೊಂಬೆ ಪ್ರದರ್ಶನ; ರಾಜಗುರುಗಳ ವಿಶ್ಲೇಷಣೆ

bombe
Published on

ಬೆಂಗಳೂರು: ದೇವಿ ಆರಾಧನೆಯ ಜೊತೆಗೆ ನವರಾತ್ರಿಯಲ್ಲಿ ದೇವತೆಗಳ ಬೊಂಬೆ ಪ್ರದರ್ಶನಕ್ಕೆ ವಿಶೇಷ ಸ್ಥಾನವಿದೆ. ಪೌರಾಣಿಕ ಕತೆಯನ್ನು ಸಾರುವ ದಸರಾ ಬೊಂಬೆ ಪರದರ್ಶನವು ಕೂಡಾ ದೇವತಾರಾಧನೆಯ ಒಂದು ವಿಶಿಷ್ಟ ಪರಿಕಲ್ಪನೆ ಎಂದು ರಾಜಗುರು ಬಿ.ಎಸ್.ದ್ವಾರಕನಾಥ ಹೇಳಿದ್ದಾರೆ.

ಕರ್ನಾಟಕದ ಮಟ್ಟಿಗೆ ನವರಾತ್ರಿ, ದಸರಾ ಹಬ್ಬ ಬಹಳ ಪ್ರಮುಖವಾಗಿದ್ದು, ನಮ್ಮ ತಂದೆ ಮತ್ತು ಪೂರ್ವಜರು ಮೈಸೂರಿನಲ್ಲೇ ಹುಟ್ಟಿದವರು ಹಾಗಾಗಿ ಮೈಸೂರಿನಲ್ಲಿ ಪ್ರತಿ ಮನೆಯಲ್ಲೂ ಬೊಂಬೆ ಕೂರಿಸುವಂತೆ ನಮ್ಮಲ್ಲಿ ಬೊಂಬೆ ಕೂರಿಸುವ ಪದ್ಧತಿ ಮುಂದುವರೆದಿದೆ. ಬೊಂಬೆ ಕೂರಿಸುವುದು ಕುಲವೃದ್ಧಿಯ ಸಂಕೇತವೂ ಹೌದು. ಸಕುಟುಂಬ ವ್ಯವಸ್ಥೆಯ ಪರಿಕಲ್ಪನೆಯನ್ನು ನವಪೀಳಿಗೆಗೆ ಮನವರಿಕೆ ಮಾಡಲು ಬೊಂಬೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ಈ ಮೂಲಕ ನವರಾತ್ರಿಯಲ್ಲಿ ತಾಯಿಯ ಸ್ವರೂಪವಾಗಿರುವ ಲಲಿತಾ ಪರಮೇಶ್ವರಿಯನ್ನು ಪೂಜಿಸಲಾಗುತ್ತದೆ ಎಂದು ರಾಜಗುರು ವಿವರಿಸಿದರು.

ಸಾಮಾನ್ಯವಾಗಿ ಬೊಂಬೆ ಕೂರಿಸುವ ಪದ್ಧತಿ ಇರುವವರು ಹತ್ತೋ, ಇಪ್ಪತ್ತೋ ಬೊಂಬೆಗಳನ್ನು ಕೂಡಿಸುತ್ತಾರೆ. ಆದರೆ ದ್ವಾರಕಾನಾಥ್ ಗುರೂಜಿ ಮನೆಯಲ್ಲಿ ಸಾವಿರಕ್ಕಿಂತ ಹೆಚ್ಚಿನ ಬೊಂಬೆಗಳನ್ನು ಪ್ರದರ್ಶನಕ್ಕಿರಿಸಿರುವುದು ಗಮನಾರ್ಹ. ಜೊತೆಗೆ ಪ್ರತಿವರ್ಷ ಹೊಸ ಬೊಂಬೆಗಳನ್ನು ಪ್ರತಿಷ್ಠಾಪಿಸುವುದು ಇಲ್ಲಿನ ವಿಶೇಷ.

ಶ್ರೀನಿವಾಸ ಕಲ್ಯಾಣ, ಸಂಪೂರ್ಣ ರಾಮಾಯಣ, ಮಹಾಭಾರತ, ರಾಘವೇಂದ್ರ ವೈಭವ, ಶ್ರೀಗುರು ಚರಿತ್ರೆ, ಶ್ರೀಕೃಷ್ಣಲೀಲೆ, ಚಾಮುಂಡೇಶ್ವರಿ ಮಹಿಮೆ, ತಿರುಪತಿ ಬ್ರಹ್ಮೋತ್ಸವ, ಭಗವಂತನ ದಶಾವತಾರ, ಆದಿಶಕ್ತಿಯ ವಿವಿಧ ಅವತಾರ, ಲಕ್ಷ್ಮಿ ನರಸಿಂಹ ಲೀಲೆ, ಮಹಾತ್ಮರ ಚರಿತ್ರೆ ಹೀಗೆ ಪುರಾಣಗಳ ಕಥಾಪ್ರಸಂಗವನ್ನು ಬೊಂಬೆಗಳ ಮೂಲಕ ಅನಾವರಣ ಮಾಡಿದ್ದಾರೆ.

ಲಲಿತಾ ಸಹಸ್ರನಾಮದ ಸುಂದರೇಶ ಪ್ರಸಂಗ

ಪ್ರತಿವರ್ಷದಂತೆ ಒಂದೊಂದು ಪರಿಲ್ಪನೆಯನ್ನು ಇರಿಸಿಕೊಂಡು ದಸರಾ ಬೊಂಬೆ ಪ್ರದರ್ಶನ ಮಾಡುತ್ತೇವೆ. ಈ ವರ್ಷ ಪ್ರಧಾನವಾಗಿ ಲಲಿತಾ ಸಹಸ್ರನಾಮ ಪರಿಕಲ್ಪನೆಯಲ್ಲಿ ಬೊಂಬೆ ಪ್ರದರ್ಶನ ಏರ್ಪಡಿಸಿದ್ದೇವೆ. ಸ್ಮಶಾನವಾಸಿಯಾದ ಶಿವನು ಸರ್ವಾಭರಣ ಭೂಷಿತನಾಗಿ ಅತ್ಯಂತ ಸ್ಪುರದ್ರೂಪಿಯಾಗಿ ಸುಂದರೇಶನೆಂಬ ಹೆಸರಿನಿಂದ ಮಧುರೆ ಮೀನಾಕ್ಷಿಯನ್ನು ವಿವಾಹವಾಗವ ಪ್ರಸಂಗವನ್ನು ಬೊಂಬೆಗಳ ಮೂಲಕ ತೋರಿಸಿದ್ದೇವೆ ಎಂದು ರಾಜಗುರುಗಳ ಪುತ್ರಿ ಡಾ. ಮೇಕಲಾ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net