

ಹಾವೇರಿ: ರಾಜ್ಯ ಸರ್ಕಾರ ರೈತರ ಆತ್ಮಹತ್ಯೆ ಪ್ರಕರಣಗಳ ಕುರಿತು ಸರಿಯಾದ ಅಧ್ಯಯನ ನಡೆಸಬೇಕು. ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಆತ್ಮಹತ್ಯೆ ಪ್ರಕರಣ ನಿಲ್ಲಿಸುವಂತಹ ಶಾಶ್ವತ ಪರಿಹಾರ ಕಂಡುಕೊಳ್ಳಲು ಸರ್ಕಾರ ಮುಂದಾಗಬೇಕು ಎಂದು ಭಾರತೀಯ ಕಿಸಾನ್ ಯುನಿಯನ್ ಅಧ್ಯಕ್ಷ ರಾಕೇಶ ಟಿಕಾಯತ್ ಒತ್ತಾಯಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶ ಹಾಗೂ ರಾಜ್ಯದಲ್ಲಿ ಯಾವುದೇ ಸರ್ಕಾರ ಬಂದರೂ ಕೃಷಿ ಸರಿಯಾದ ದಾರಿಯಲ್ಲಿ ಮುಂದುವರೆಯಬಾರದು ಎಂಬ ಧೋರಣೆ ಹೊಂದುತ್ತಿರುವುದು ಸರಿಯಲ್ಲ.
ರೈತರಿಗೆ ಸಮರ್ಪಕ ಬೀಜ, ರಸಗೊಬ್ಬರ ಜತೆಗೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದ ರೀತಿ ವ್ಯವಸ್ಥಿತವಾಗಿ ನೋಡಿಕೊಳ್ಳುವ ಜಾಲ ಹೊಂದಿವೆ. ಬಂಡವಾಳಶಾಹಿಗಳು ಆಳುತ್ತಿರುವ ಸರ್ಕಾರಗಳ ಮೂಲಕ ಕೃಷಿಯನ್ನು ನಷ್ಟದಲ್ಲಿಟ್ಟು ರೈತರ ಭೂಮಿಯನ್ನು ಬಂಡವಾಳಶಾಹಿಗಳಿಗೆ ಹಸ್ತಾಂತರ ಮಾಡುವ ಕುತಂತ್ರದ ಧೋರಣೆಯನ್ನು ಸರ್ಕಾರಗಳು ಹೊಂದಿವೆ ಎಂದು ಆರೋಪಿಸಿದರು.
ಮುಂದಿನ ಸರ್ಕಾರ ಯಾವುದೇ ಬರಲಿ ರೈತ ವಿರೋಧಿ ನೀತಿಗಳನ್ನು ತಂದಲ್ಲಿ ಅದರ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಎಚ್ಚರಿಸಿದರು.
ರೈತರ ಸಂಘಟನೆ ಹಿನ್ನೆಲೆಯಲ್ಲಿ ಶಿಬಿರ...
ರೈತ ಮುಖಂಡ ಚುಕ್ಕಿ ನಂಜುಂಡಸ್ವಾಮಿ ಮಾತನಾಡಿ, ಕೃಷಿಯಲ್ಲಿ ತೊಡಗಿರುವ ಹೊಸ ತಲೆಮಾರಿನ ರೈತರಿಗೆ ಕೃಷಿಯಲ್ಲಿನ ಬಿಕ್ಕಟ್ಟು, ಸಮಸ್ಯೆ ನಿವಾರಣೆಗೆ ಹೇಗೆ ಎದುರಿಸಬೇಕು ಹಾಗೂ ರೈತರನ್ನು ಸಂಘಟನೆ ಮಾಡುವ ಬಗ್ಗೆ ಮೇ 31 ಹಾಗೂ ಜೂನ್ 1ಮತ್ತು 2ರಂದು ಶಿವಮೊಗ್ಗ ಜಿಲ್ಲೆ ಶಿರಾಳಕೊಪ್ಪದಲ್ಲಿ ಮೂರು ದಿನಗಳ ನಾಯಕತ್ವದ ತರಬೇತಿ ಶಿಬಿರ ಆಯೋಜಿಸಿದೆ. ಈ ಶಿಬಿರ ರೈತ ಸಮುದಾಯಕ್ಕೆ ಬಹಳ ಮುಖ್ಯವಾಗಿದ್ದು ಆಸಕ್ತ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಳೆದ ಒಂದುವಾರದಿಂದ ಮಳೆ ಆಗುತ್ತಿರುವುದು ಸಂತಸ ತಂದಿದೆ. ರೈತ ಆತ್ಮಹತ್ಯೆ ಬಗ್ಗೆ ಸಚಿವರು ಕ್ಷುಲ್ಲಕ ಮಾತುಗಳನ್ನು ಆಡಿದ್ದು ಖಂಡನೀಯ. ರೈತರ ಆತ್ಮಹತ್ಯೆ ಸರ್ಕಾರವು ಮಾಡುತ್ತಿರುವ ವ್ಯವಸ್ಥಿತವಾದ ಕಗ್ಗೊಲೆ ಆಗಿದೆ. ರೈತರದ ಧೋರಣೆ ರೈತರು ಪ್ರಾಣ ಕಳೆದುಕೊಳ್ಳುವ ಭೀತಿ ಎದುರಾಗಿದೆ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೆರ, ಪ್ರಮುಖರಾದ ಶಿವಬಸಪ್ಪ ಗೋವಿ, ಸುರೇಶ ಚಲವಾದಿ, ಶಿವಯೋಗಿ ಹೊಸಗೌಡ್ರ, ಕೇಸರಿ ಮನೋಹರ ಪಾಟೀಲ, ಕಬ್ಬಡ್ಡಿ ನರೇಂದ್ರ ಬಾಬು ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.