ಮನೆ ನಿರ್ಮಾಣ ಸಾಲಕ್ಕೆ ಲೋನ್ ಸೆಕ್ಯೂರ್ ಸೂಕ್ತ - ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ನವನೀತ್ ಸಲಹೆ

PTR_1 JUL_2
Published on

ಪುತ್ತೂರು: ಮನೆ ನಿರ್ಮಾಣ ಸಾಲವನ್ನು ಲೋನ್ ಸೆಕ್ಯೂರ್ ಮಾಡುವುದರಿಂದ ಮುಂದಿನವರಿಗೆ ಲೋನ್ ಹೊರೆಯಾಗುವುದಿಲ್ಲ. ೧೫ ವರ್ಷದಿಂದ ಚಾಲ್ತಿ ಇರದ ಖಾತೆಯ ಹಣ ಆರ್‌ಬಿಐಗೆ ಹೋಗುತ್ತದೆ. ಆ ಬಳಿಕ ಖಾತೆದಾರರು ಅರ್ಜಿ ನೀಡಿ ಹಣ ಹಿಂಪಡೆಯಲು ಅವಕಾಶಗಳಿವೆ ಎಂದು ಕೆನರಾ ಬ್ಯಾಂಕ್ ಸೀನಿಯರ್ ಮ್ಯಾನೇಜರ್ ನವನೀತ್ ಹೇಳಿದರು.

ಪುತ್ತೂರಿನ ರೈತ ಸಂಘದ ಜಿಲ್ಲಾ ಕೇಂದ್ರ ಕಚೇರಿಯಲ್ಲಿ ಕೆನರಾ ಬ್ಯಾಂಕಿನಿಂದ ಆಯೋಜಿಸಲಾಗಿದ್ದ ರೈತರಿಗೆ ವಿವಿಧ ಸಾಲ ಸೌಲಭ್ಯಗಳ ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.

ಗ್ರಾಹಕರು ಒಟಿಪಿ ಅಥವಾ ಲಿಂಕ್ ಬಳಸಿ ಹಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆಯಾಗುವುದಿಲ್ಲ. ವಿಮಾ ಸವಲತ್ತುಗಳನ್ನು ಗ್ರಾಹಕರಿಗೆ ನೀಡಲಾಗುತ್ತಿದೆ. ಕೆನರಾ ಬ್ಯಾಂಕಿನಿಂದ ವಿವಿಧ ಸವಲತ್ತುಗಳಿದ್ದು, ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದರು.

ರೈತರಿಗೆ ಬ್ಯಾಂಕ್ ಸಾಲಗಳ, ಮುದ್ರಾಯೋಜನೆ, ಕುರಿ, ಕೋಳಿ, ಹಂದಿ, ಪಶು ಸಾಕಣೆಗೆ ಬ್ಯಾಂಕಿನ ಆರ್ಥಿಕ ನೆರವಿನ ಬಗ್ಗೆ ಮಾಹಿತಿ ನೀಡಿದರು.

ಸೀನಿಯರ್ ಮ್ಯಾನೇಜರ್ ನವನೀತ್, ಸುರೇಶ್, ಸತೀಶ್, ಮ್ಯಾನೇಜರ್ ಕೃಷ್ಣ ರಾಜ್, ರೈತ ಸಂಘದ ಅಧ್ಯಕ್ಷ ಶ್ರೀಧರ ಶೆಟ್ಟಿ ಬೈಲುಗುತ್ತು, ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ ನಡಿಕಂಬಳಗುತ್ತು, ಗೌರವ ಸಲಹೆಗಾರ ಮುರುವ ಮಹಾಬಲ ಭಟ್, ರಾಮಣ್ಣ ಪಾಳಿಗೆ ಮತ್ತಿತರರಿದ್ದರು.

ರೈತರು ಬ್ಯಾಂಕ್‌ಗೆ ಹೋದಾಗ ಶಾಖೆಗಳಲ್ಲಿ ಸತಾಯಿಸುವ ಕಾರ್ಯವಾಗುತ್ತಿದೆ. ಅಧಿಕಾರಿಗಳಿಗೆ ಸೌಲಭ್ಯಗಳ ಮಾಹಿತಿಯನ್ನು ಸರಿಯಾಗಿ ನೀಡಬೇಕು. ಸಾಲ ಮರು ಪಾವತಿ ಬಳಿಕ ಜಾಗದ ಮೂಲ ದಾಖಲೆಗಳನ್ನು ಸರಿಯಾಗಿ ನೀಡಲು ವ್ಯವಸ್ಥೆ ಮಾಡಬೇಕು.

| ಶ್ರೀಧರ ಶೆಟ್ಟಿ ಬೈಲುಗುತ್ತು

ರೈತ ಸಂಘದ ಅಧ್ಯಕ್ಷ

ಬ್ಯಾಂಕಿನಲ್ಲಿ ನಗುಮುಖದ ಸೇವೆಯನ್ನು ನೀಡಬೇಕು. ರೈತರನ್ನು ಹೆಚ್ಚು ಅಲೆದಾಡಿಸದೆ, ಸೂಕ್ತ ಮಾಹಿತಿ ನೀಡಬೇಕು. ಸಾಲ ಮರುಪಾವತಿಗೆ ಬರುವ ಸಂದರ್ಭವೂ ಅಗತ್ಯ ವ್ಯವಸ್ಥೆ ಮಾಡಬೇಕು. ಒನ್ ಟೈಮ್ ಸೆಟಲ್‌ನವರಿಗೆ ವಿಶೇಷ ರಿಯಾಯಿತಿ ನೀಡಬೇಕು.

| ಮನೋಹರ ಶೆಟ್ಟಿ ನಡಿಕಂಬಳಗುತ್ತು

ರೈತ ಸಂಘದ ರಾಜ್ಯ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net