

ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ವೈಯಕ್ತಿಕವಾಗಿ 2 ಲಕ್ಷ ರೂ. ನೆರವು
ವಿಜಯನಗರ: ಕೂಡ್ಲಿಗಿ ತಾಲೂಕಿನ ಕೆ. ರಾಯಪುರ ಗ್ರಾಮದಲ್ಲಿ ಗುಡಿಸಲು ಬಂಡೆ ಕುಸಿದು ನಾಲ್ಕು ವರ್ಷದ ಬಾಲಕ ತೇಜಸ್ ಮೃತ ಪಟ್ಟ ಕುಟುಂಬಕ್ಕೆ ವಸತಿ, ಅಲ್ಪಸಂಖ್ಯಾತರ ಹಾಗೂ ವಿಜಯನಗರ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ವೈಯಕ್ತಿಕವಾಗಿ ಎರಡು ಲಕ್ಷ ರೂ. ಪರಿಹಾರ ನೀಡಿದ್ದಾರೆ.
ಜಿಲ್ಲಾ ಪ್ರವಾಸದಲ್ಲಿದ್ದ ಸಚಿವರು ಮಂಗಳವಾರ ಘಟನೆ ತಿಳಿದು ಶಾಸಕ ಶ್ರೀನಿವಾಸ್ ಜತೆಗೂಡಿ ಗ್ರಾಮಕ್ಕೆ ಭೇಟಿ ನೀಡಿ ತಂದೆ ಶಾಂತಕುಮಾರ್ -ತಾಯಿ ಮಲ್ಲೇಶ್ವರಿ ಗೆ ಸಾಂತ್ವನ ಹೇಳಿ ಎರಡು ಲಕ್ಷ ಪರಿಹಾರ ನೀಡಿದರು. ಅಲ್ಲದೇ, ರಾಜೀವ್ ಗಾಂಧಿ ವಸತಿ ನಿಗಮದಿಂದ ಅಂಬೇಡ್ಕರ್ ಆವಾಸ್ ಯೋಜನೆಯಡಿಯಲ್ಲಿ ಮನೆ ಕಟ್ಟಿಕೊಡುವುದು, ಮುಖ್ಯಮಂತ್ರಿ ಅವರ ಪರಿಹಾರ ನಿಧಿ ಯಿಂದಲೂ ನೆರವು ಕೊಡಿಸುವುದಾಗಿ ಭರವಸೆ ಸಹ ನೀಡಿದರು.
ಇತ್ತೀಚೆಗೆ ಕೂಡ್ಲಿಗಿಯ ಎಂ ಬಿ ಅಯ್ಯನಹಳ್ಳಿ ರಸ್ತೆ ಅಪಘಾತ ದಲ್ಲಿ ಮೃತಪಟ್ಟಿದ್ದ ಬಾಲಕಿ ಸಿಂಚನಾಳ ತಾಯಿ ಎಚ್. ಜಯಮ್ಮ ಅವರಿಗೆ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಮಂಗಳವಾರ ಪ್ರವಾಸಿ ಮಂದಿರದಲ್ಲಿ ವೈಯಕ್ತಿಕವಾಗಿ ಒಂದು ಲಕ್ಷ ರೂ. ನೆರವು ನೀಡಿದರು.
ಶಾಸಕ ಡಾ.ಎನ್.ಟಿ.ಶ್ರೀನಿವಾಸ ಜೊತೆಗಿದ್ದರು.