ದ.ಕ ಜಿಲ್ಲೆಯಲ್ಲಿ ಮಳೆ ಕ್ಷೀಣ

Published on

ಮಂಗಳೂರು: ದ.ಕ ಜಿಲ್ಲೆಯಲ್ಲಿ ಶುಕ್ರವಾರ ಬೆಳಗ್ಗಿಯಿಂದ ಮಧ್ಯಾಹ್ನ ವರೆಗೆ ಬಿಸಿಲಿನ ವಾತಾವರಣ ಕಂಡುಬಂದಿದ್ದು, ಸಂಜೆ ಮೋಡಕವಿದ ವಾತಾವರಣ ಇದ್ದರೂ ಅಲ್ಪ ಮಳೆಯ ಸಿಂಚನವಾಗಿದೆ.

ಮಂಗಳೂರು ಸೇರಿದಂತೆ ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಗುರುವಾರ ರಾತ್ರಿ ಹಲವು ಗಂಟೆಗಳ ಕಾಲ ಹನಿಮಳೆಯಾಗಿತ್ತು. ಶುಕ್ರವಾರ ಬೆಳಗ್ಗೆ ಜಿಲ್ಲೆಯ ಹಲವಡೆ ಮೋಡಕವಿದ ವಾತಾವರಣ ಕಂಡುವಂದಿದ್ದು, ಮನಂತರ ಬಿಸಿಲು ಆವರಿಸಿತ್ತು. ಸುಳ್ಯ, ಕಡಬ ತಾಲೂಕಿನ ಹಲವೆಡೆ ದಿನಪೂರ್ತಿ ಬಿಸಿಲು ಸಹಿತ ಕೆಲವೊಮ್ಮೆ ಹನಿ ಮಳೆಯಾಗಿದೆ. ಬೆಳ್ತಂಗಡಿ, ಬಂಟ್ವಾಳ, ಸುಳ್ಯ ಸುತ್ತಮುತ್ತ ಸಂಜೆ ವೇಳೆ ಸಾಧಾರಣ ಗುಡುಗು ಸಹಿತ ಮಳೆಯಾಗಿದೆ. ಪುತ್ತೂರು ಪೇಟೆಯಲ್ಲಿ ಹನಿ ಮಳೆಯಾದರೆ ಕೆಲವು ಕಡೆ ಸಿಡಿಲು ಸಹಿತ ಮಳೆಯಾಗಿದೆ.

ಶನಿವಾರ ಕಾಸರಗೋಡು ಸೇರಿದಂತೆ ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಮೋಡ ಹಾಗೂ ಅಲ್ಲಲ್ಲಿ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಮುಂಗಾರು ದುರ್ಬಲಗೊಂಡಿದ್ದರೂ ಸೆ.12ರ ತನಕ ಬಿಟ್ಟು ಬಿಟ್ಟು ಸಾಮಾನ್ಯ ಮಳೆಯ ಸಾಧ್ಯತೆಗಳಿವೆ. ನಂತರ ಮೋಡ ಹಾಗೂ ಬಿಸಿಲಿನ ವಾತಾವರಣದ ಸಾಧ್ಯತೆ ಇದೆ.

ಶುಕ್ರವಾರ ಬೆಳಗ್ಗಿನವರೆಗೆ ಜಿಲ್ಲೆಯಲ್ಲಿ ಸರಾಸರಿ 11.1 ಮಿಮೀ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಗಾಳಿಯ ಪ್ರಮಾಣ ತುಸು ಹೆಚ್ಚಳವಾಗಿರುವುದರಿಂದ ಕಡಲತೀರ ನಿವಾಸಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ದ.ಕ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾನುವಾರ ಗರಿಷ್ಠ 32.9 ಡಿಗ್ರಿ ಸೆಲ್ಸಿಯಸ್, ಕನಿಷ್ಠ 23.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಶನಿವಾರ ವೇಳೆ ತುಸು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮಾಹಿತಿ ನೀಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net