

ಗುವಾಹಟಿ: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ವಿಶ್ವಕಪ್ ಟೂರ್ನಿಯ ಮೊದಲ ಅಭ್ಯಾಸ ಪಂದ್ಯ ಭಾರಿ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಶನಿವಾರ ಪಂದ್ಯ ಆರಂಭಕ್ಕೂ ಮುನ್ನವೇ ಜಿಟಿ ಜಿಟಿ ಮಳೆ ಸುರಿಯಲಾರಂಭಿಸಿತು. ಇದರಿಂದ ನಿಗದಿತ ಸಮಯಕ್ಕಿಂತ ತಡವಾಗಿ ಟಾಸ್ ಪ್ರಕ್ರಿಯೆ ನಡೆಸಲಾಯಿತು. ಟಾಸ್ ಗೆದ್ದ ನಾಯಕ ರೋಹಿತ್ ಶರ್ಮ ಬ್ಯಾಟಿಂಗ್ ಆಯ್ದುಕೊಂಡರು. ನಂತರ ಸತತ ನಾಲ್ಕು ಗಂಟೆ ಸುರಿದ ಮಳೆಯಿಂದಾಗಿ ಭಾರತೀಯ ಕಾಲಮಾನ ಸಂಜೆ 6 ಗಂಟೆಗೆ ಪಂದ್ಯವನ್ನು ರದ್ದುಗೊಳಿಸಲಾಯಿತು. ಆಸೀಸ್ ವಿರುದ್ಧದ ಏಕದಿನ ಸರಣಿಯ ಬಳಿಕ ಗುರುವಾರ ಗುವಾಹಟಿಗೆ ತೆರಳಿದ್ದ ಟೀಮ್ ಇಂಡಿಯಾ ಒಂದೂ ಎಸೆತ ಆಡದೆ ಅಲ್ಲಿಂದ ಇನ್ನು 2,506 ಕಿಲೋಮೀಟರ್ ದೂರದ (ವಾಯುಮಾರ್ಗ) ತಿರುವನಂತಪುರಕ್ಕೆ ತೆರಳಲಿದೆ. ಮಂಗಳವಾರ ಅಲ್ಲಿ ನೆದರ್ಲೆಂಡ್ ವಿರುದ್ಧ 2ನೇ ಹಾಗೂ ಕೊನೇ ಅಭ್ಯಾಸ ಪಂದ್ಯ ನಡೆಯಲಿದೆ. ಆದರೆ ಕೇರಳದ ತಿರುವನಂತಪುರದಲ್ಲೂ ಮಳೆ ಕಾಡುವ ಸಾಧ್ಯತೆ ಇದೆ.
ಕೊನೇ ವಿಶ್ವಕಪ್ ಎಂದ ಅಶ್ವಿನ್
ಅಕ್ಷರ್ ಪಟೇಲ್ ಬದಲಿಗೆ ಕೊನೇಕ್ಷಣದಲ್ಲಿ ಭಾರತ ತಂಡದಲ್ಲಿ ಸ್ಥಾನ ಸಂಪಾದಿಸಿರುವ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ ಇದೇ ತನ್ನ ಕೊನೇ ವಿಶ್ವಕಪ್ ಆಗಿದೆ ಎಂದು ಹೇಳಿದ್ದಾರೆ. ಹೀಗಾಗಿ ಟೂರ್ನಿಯನ್ನು ಸಂಪೂರ್ಣವಾಗಿ ಆನಂದಿಸಲು ಬಯಸಿದ್ದೇನೆ. ಜೀವನ ಅಚ್ಚರಿಗಳಿಂದ ತುಂಬಿರುತ್ತವೆ. ನಾನು ಈ ಬಾರಿ ವಿಶ್ವಕಪ್ ಆಡುತ್ತೇನೆ ಎಂದು ನಿರೀಕ್ಷಿಸಿರಲಿಲ್ಲ. ಆದರೆ ಪರಿಸ್ಥಿತಿಗಳು ನನಗೆ ಪೂರಕವಾಗಿ ಬಂದವು ಎಂದು 37 ವರ್ಷದ ಅಶ್ವಿನ್ ಹೇಳಿದ್ದಾರೆ. ಅಶ್ವಿನ್ 2011, 2015ರ ವಿಶ್ವಕಪ್ಗಳಲ್ಲಿ ಒಟ್ಟು 10 ಪಂದ್ಯ ಆಡಿದ್ದು, 17 ವಿಕೆಟ್ ಕಬಳಿಸಿದ್ದಾರೆ. ರೋಹಿತ್ ಶರ್ಮ ಪಡೆ ಈ ಬಾರಿ ವಿಶ್ವಕಪ್ ಗೆದ್ದರೆ ಅಶ್ವಿನ್ ಮತ್ತು ವಿರಾಟ್ ಕೊಹ್ಲಿ 2 ಬಾರಿ ಟ್ರೋಫಿ ಗೆದ್ದ ಮೊದಲ ಭಾರತೀಯ ಸಾಧಕರೆನಿಸಲಿದ್ದಾರೆ.
ನಾಳಿನ ಪಂದ್ಯಗಳು
ಬಾಂಗ್ಲಾದೇಶ-ಇಂಗ್ಲೆಂಡ್
ನ್ಯೂಜಿಲೆಂಡ್-ದ.ಆಫ್ರಿಕಾ
ಆರಂಭ: ಮಧ್ಯಾಹ್ನ 2
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್