ವಿಜಯವಾಣಿ ಸುದ್ದಿಜಾಲ ಹೆಬ್ರಿ
ತಾಲೂಕಿನಲ್ಲಿ ಜುಲೈ ತಿಂಗಳು ಸುರಿದ ಭಾರಿ ಮಳೆಯಿಂದಾಗಿ ಕೃಷಿ, ತೋಟಗಾರಿಕಾ ಬೆಳೆ, ಮೆಸ್ಕಾಂಗೆ ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ನದಿ ತೋಡುಗಳು ಉಕ್ಕಿ ಹರಿದು ಸಮೀಪದ ಗದ್ದೆ, ತೋಟ, ಮನೆಗಳಿಗೆ ಹಾನಿಯಾಗಿದೆ. ಹತ್ತಾರು ಮನೆಗಳ ಮೇಲೆ ಮರ ಬಿದ್ದು ನಷ್ಟ ಉಂಟಾಗಿದೆ. ತಾಲೂಕಿನಲ್ಲಿ ಗಾಳಿ ಮಳೆಗೆ ಇಲ್ಲಿಯವರೆಗೆ 35 ಮನೆಗಳಿಗೆ ಹಾನಿಯಾಗಿದೆ. 41 ಎಕರೆ ಭತ್ತದ ಕೃಷಿ ಭೂಮಿ ನಾಶವಾಗಿದೆ. ಗದ್ದೆಯ ಅಂಚುಗಳು ತೊಳೆದುಕೊಂಡು ಹೋಗಿವೆ. ಸುಮಾರು 500 ವಿದ್ಯುತ್ ಕಂಬಗಳು ಧರಾಶಾಯಿಯಾಗಿವೆ. ಹೆಚ್ಚು ಪ್ರಮಾಣದಲ್ಲಿ ಟ್ರಾನ್ಸ್‌ಫಾರ್ಮರ್‌ಗೆ ಹಾನಿಯಾಗಿದೆ.
ಮಳೆ ಪ್ರಮಾಣ
ಉಡುಪಿ ಜಿಲ್ಲೆಯಲ್ಲಿ ಜುಲೈ ತನಕ 1,365 ಮಿ.ಮೀ ವಾಡಿಕೆ ಮಳೆ ಆಗಬೇಕಿತ್ತು. 1,900 ಮಿಮಿ ಮಳೆ ಸುರಿದು ಸುಮಾರು ಶೇ.40ರಷ್ಟು ಹೆಚ್ಚಾಗಿದೆ. ಹೆಬ್ರಿಯಲ್ಲಿ 1,807 ವಾಡಿಕೆ ಮಳೆ ಇದ್ದು, 2,137 ಸುರಿದು ಶೇ.18ರಷ್ಟು ಹೆಚ್ಚಾಗಿದೆ.
ಅಡಕೆ ಮೇಲೆ ಪರಿಣಾಮ
ತಾಲೂಕಾದ್ಯಂತ ಸುಮಾರು 5,000 ತೋಟಗಾರಿಕಾ ಗಿಡಮರಗಳಿಗೆ ಹಾನಿಯಾಗಿದೆ. ರಬ್ಬರ್, ಕೋಕೋ, ಕಾಳುಮೆಣಸು, ತೆಂಗಿನಕಾಯಿ ಸೇರಿದಂತೆ ಇನ್ನಿತರ ಬೆಳೆಗಳಿಗೆ ಬಹಳಷ್ಟು ಹಾನಿಯಾಗಿದೆ. ಸುಮಾರು 2000 ಅಡಕೆ ಮರಗಳು ಧರಾಶಾಯಿಯಾಗಿವೆ. ಕಬ್ಬಿನಾಲೆಯಲ್ಲಿ ಒಂದೇ ಮನೆಯ 700 ಅಡಕೆ ಮರಗಳು ಸುಳಿಗಳಿಗೆ ನಾಶವಾಗಿತ್ತು. ವಿಪರೀತ ಮಳೆಯಿಂದ ಕೊಳೆರೋಗ ಉಂಟಾಗುವ ಲಕ್ಷಣ ಹೆಚ್ಚಿದೆ.
ಈ ವರ್ಷಬಹಳ ಮಳೆ ಬಂದು ಕೃಷಿ ಪ್ರದೇಶಗಳಿಗೆ ಭಾರಿ ಹಾನಿಯಾಗಿದೆ. ಸುಮಾರು 41 ಎಕರೆ ಭತ್ತದ ಕೃಷಿ ಭೂಮಿ ನಾಶವಾಗಿದೆ. ಬಹುತೇಕ ಕಡೆಯಲ್ಲಿ ಕೊಳೆತಿದೆ. ಅರ್ಜಿ ಸಲ್ಲಿಸಿದ ರೈತರಿಗೆ ಆದ್ಯತೆ ನೆಲೆಯಲ್ಲಿ ಪರಿಹಾರ ಸಿಗಲಿದೆ.
ಗೋವಿಂದ ನಾಯ್ಕ, ಸಹಾಯಕ ಕೃಷಿ ನಿರ್ದೇಶಕ
ಮಳೆ ಅನೇಕ ಅವಾಂತರಗಳನ್ನು ಸೃಷ್ಟಿ ಮಾಡಿದೆ. ಅನೇಕ ಮನೆಗಳಿಗೆ ಅಪಾಯ ಉಂಟು ಮಾಡಿತ್ತು. ಪ್ರಾಕೃತಿಕ ವಿಕೋಪದಲ್ಲಿ ಪರಿಹಾರ ಒದಗಿಸಲಾಗಿದೆ. ಕೃಷಿ ಪರಿಹಾರಕ್ಕೆ ಸಂಬಂಧಿಸಿ ಅರ್ಜಿ ಸ್ವೀಕರಿಸಲಾಗಿದೆ. ಆದ್ಯತೆ ಮೇರೆಗೆ ಎಲ್ಲರ ಕೆಲಸ ಮಾಡಿಕೊಳ್ಳಲಾಗುವುದು.
-ಎಸ್.ಎ.ಪ್ರಸಾದ್, ಹೆಬ್ರಿ ತಹಸೀಲ್ದಾರ್
ನಾವು ವಿದ್ಯುತ್ ಸಂಪರ್ಕಕ್ಕಾಗಿ ಮೆಸ್ಕಾಂ ಸಿಬ್ಬಂದಿಯೊಂದಿಗೆ ಒಟ್ಟಾಗಿ ಕೆಲಸ ಮಾಡಿದ್ದೇವೆ. ಒಂದೆರಡು ಭಾರಿ ವಿದ್ಯುತ್ ಪೂರೈಕೆ ವೃತ್ಯಯವಾಗಿದೆ ಬಿಟ್ಟರೆ ಬೇರೆ ಎಲ್ಲೂ ಸಮಸ್ಯೆ ಆಗಿಲ್ಲ. ಇದರೊಂದಿಗೆ ಬಹುತೇಕ ಕಡೆ ಪಂಚಾಯಿತಿ ಸದಸ್ಯರು ಸಾಥ್ ನೀಡಿರುವುದು ಉತ್ತಮವಾದ ಬೆಳವಣಿಗೆ.
-ಮಹೇಶ್ ಶೆಟ್ಟಿ ಬಾದ್ಲು, ಕುಚ್ಚೂರು ಗ್ರಾಪಂ ಉಪಾಧ್ಯಕ್ಷ