

ಕಡಬ: ತಾಲೂಕಿನ ಕಾಯಿಮಾಣ ಮತ್ತು ದೋಳ್ಪಾಡಿ, ಎಡಮಂಗಲ ಗ್ರಾಮದಲ್ಲಿ ಸೋಮವಾರ ಬೆಳಗ್ಗಿನ ಜಾವ ಬೀಸಿದ ಬಿರುಗಾಳಿಗೆ ಅಪಾರ ಹಾನಿಯುಂಟಾಗಿದೆ.
ಕಾಯಿಮಣ ಗ್ರಾಮದ ಕಳುವಾಜೆ ಶಿವಪ್ರಸಾದ್ ಎಂಬುವರಿಗೆ ಸೇರಿದ 1,200 ಫಸಲುಭರಿತ ಅಡಕೆ ಮರಗಳು ಧರಾಶಾಯಿಯಾಗಿದ್ದು, ಮನೆಗೆ ಹಾನಿಯಾಗಿದೆ. ಈ ಭಾಗದ ಹತ್ತಾರು ರೈತರ ಅಡಕೆ ಕೃಷಿ ಹಾನಿಯಾಗಿದೆ.
ದೋಳ್ಪಾಡಿ ಗ್ರಾಮದ ರಾಮಕೃಷ್ಣ ದೋಳ ಎಂಬುವರಿಗೆ ಸೇರಿದ 1,500 ಅಡಕೆ ಮರಗಳು ನಾಶವಾಗಿವೆ. 20ಕ್ಕೂ ಹೆಚ್ಚು ತೆಂಗಿನ ಮರಗಳು ಮುರಿದು ಬಿದ್ದಿವೆ. ಗಾಳಿಯ ರಭಸಕ್ಕೆ ಸಾಕು ನಾಯಿ ಶೆಡ್‌ನ ಛಾವಣಿ ದೂರ ಹೋಗಿ ಬಿದ್ದಿದೆ.
ಕೂರೇಲು ಯಶೋಧರ ಎಂಬುವರ 300ಕ್ಕೂ ಹೆಚ್ಚು ಅಡಕೆ ಮರಗಳು ಮುರಿದು ಬಿದ್ದಿವೆ. ಜನಾರ್ದನ ಕುಕ್ಕುನಾಜ ಎಂಬುವರ ಮನೆಯ ಮೇಲೆ ಮರ ಬಿದ್ದು ಮನೆ ಸಂಪೂರ್ಣ ಜಖಂಗೊಂಡಿದೆ.
ಎಡಮಂಗಲ ಗ್ರಾಮದ ಸವಿತಾ ಮುಳಿಯ ಎಂಬುವರ ಮನೆ ಸಂಪೂರ್ಣ ಹಾನಿಗೊಂಡಿದೆ. ವಸಂತ ಅಳಕ್ಕೆ ಎಂಬುವರ ವಾಸ್ತವ್ಯದ ಮನೆಗೆ ತೆಂಗಿನಮರ ಬಿದ್ದು ಹಾನಿಯಾಗಿದೆ. ಅಳಕ್ಕೆ ರಾಧಮ್ಮ, ಗುಡ್ಡಪ್ಪ ಗೌಡ ಪಾದೆ, ಪ್ರಭಾಕರ ಪಾದೆ, ಹೊನ್ನಪ್ಪ ಗೌಡ, ಬಾಬು ನಾಯ್ಕ ಮುಳಿಯ, ನಾರಾಯಣ ನಾಯ್ಕ ಮುಳಿಯ, ಸುಂದರ ಗೌಡ ಎಡಮಂಗಲ, ಸರೋಜಿನಿ ಮುಳಿಯ, ಜಯೇಂದ್ರ, ಅಶೋಕ್ ಮುಳಿಯ ಮುಂತಾದವರ ಮನೆ, ಕೊಟ್ಟಿಗೆಗಳಿಗೆ ಹಾನಿಯಾಗಿದೆ. ಎಡಮಂಗಲ ಗ್ರಾ.ಪಂ. ಸಭಾಭವನದ ಮೇಲ್ಛಾವಣಿಯ ಶೀಟು ಹಾರಿಹೋಗಿದೆ. ಎಡಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂದ ಕಟ್ಟಡ ಮೇಲ್ಛಾವಣಿಗೆ ಹಾನಿಯಾಗಿದ್ದು, ಗೋಡೆಯಲ್ಲಿ ಬಿರುಕು ಬಿಟ್ಟಿದೆ. ಎಡಮಂಗಲ ಪೇಟೆಯಲ್ಲೂ ಹಲವು ಅಂಗಡಿ ಕಟ್ಟಡಗಳಿಗೆ ಹಾನಿ ಸಂಭವಿಸಿದೆ. ಗ್ರಾಮದ ವಿವಿಧೆಡೆ ಕೃಷಿ ತೋಟಕ್ಕೂ ಪರಿಣಾಮ ಬೀರಿದ್ದು, ಸಾವಿರಾರು ಅಡಕೆ ಮರಗಳು ನಾಶವಾಗಿವೆ.
ತೆಂಗು, ಹಲವಾರು ಇತರೆ ಕೃಷಿ, ಮರಗಳು ಧರೆಗುರುಳಿವೆ. 20ಕ್ಕೂ ಅಧಿಕ ವಿದ್ಯುತ್ ಕಂಬ, ಲೈನ್‌ಗಳಿಗೆ ಹಾನಿಯಾಗಿದೆ. ಹಲವೆಡೆ ಮರ, ಮರದ ಗೆಲ್ಲು ಬಿದ್ದು ಹಾನಿಯಾಗಿದೆ. ಹಲವೆಡೆ ರಸ್ತೆಗೆ ಮರ, ವಿದ್ಯುತ್ ಕಂಬಗಳು ಬಿದ್ದು ಸಂಚಾರ ಬಂದ್ ಆಗಿತ್ತು. ಸ್ಥಳೀಯರು, ಇಲಾಖಾಧಿಕಾರಿಗಳು ಸೇರಿಕೊಂಡು ತೆರವುಗೊಳಿಸಿ ರಸ್ತೆಯನ್ನು ಸಂಚಾರ ಮುಕ್ತಗೊಳಿಸಿದರು. ಬಿರುಗಾಳಿಗೆ ಹಾನಿಯಾದ ಸ್ಥಳಗಳಿಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.