ದೇಶದ ವಿವಿಧೆಡೆ ಮತ್ತೆ ಅಬ್ಬರಿಸಲಿದೆ ಮಳೆ..ಈ ರಾಜ್ಯಗಳಿಗೆ ರೆಡ್​ ಅಲರ್ಟ್​!

rain
Published on

ನವದೆಹಲಿ: ದೇಶದ ಉತ್ತರ, ಮಧ್ಯ ಮತ್ತು ಈಶಾನ್ಯ ರಾಜ್ಯಗಳಲ್ಲಿ ಮುಂದಿನ ನಾಲ್ಕು ದಿನ(ಜು.15ರ ವರೆಗೆ)ಭಾರಿ ಮಳೆಯಾಗಲಿದೆ. ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ಎಚ್ಚರಿಕೆ ನೀಡಿದೆ. ಇದರಿಂದಾಗಿ ಪ್ರವಾಹ ಪೀಡಿತ ಹಲವು ರಾಜ್ಯಗಳಲ್ಲಿ ಮತ್ತೆ ಆತಂಕ ಎದುರಾಗಿದೆ.

ಮುಂದಿನ ದಿನಗಳಲ್ಲಿ ಪೂರ್ವ ಉತ್ತರ ಪ್ರದೇಶ, ದೆಹಲಿ ಎನ್‌ಸಿಆರ್ ಮತ್ತು ಇತರ ಪ್ರದೇಶಗಳು ಸೇರಿದಂತೆ ಉತ್ತರ ಮತ್ತು ಈಶಾನ್ಯ ಭಾರತದಲ್ಲಿ ಮಳೆಯ ಚಟುವಟಿಕೆ ಹೆಚ್ಚಾಗಲಿದೆ ಜುಲೈ 11 ರಂದು ಬಿಹಾರ ಮತ್ತು ಉತ್ತರ ಪ್ರದೇಶದ ಕೆಲವು ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ 'ಆರೆಂಜ್ ಅಲರ್ಟ್' ನೀಡಿದೆ.

ಮುಂದಿನ ದಿನಗಳಲ್ಲಿ ದೆಹಲಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ನಿರೀಕ್ಷೆಯಿದೆ ಎಂದು ಐಎಂಡಿ ಸೂಚಿಸಿದೆ. ಮುಂಗಾರು ಹಂಗಾಮಿನಲ್ಲಿ ಭಾರಿ ಮಳೆಯಾಗುತ್ತಿದ್ದು, ಯಮುನಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಈ ಎಚ್ಚರಿಕೆ ನೀಡಲಾಗಿದೆ.

ಉತ್ತರ ಪ್ರದೇಶದಲ್ಲಿ ಪೂರ್ವ ಮತ್ತು ಪಶ್ಚಿಮ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ನಿರಂತರ ಮಳೆಯಾಗಲಿದೆ. ಈಗಾಗಲೇ ರಾಜ್ಯದ 12 ಜಿಲ್ಲೆಗಳು ಪ್ರವಾಹದಿಂದ ಹಾನಿಗೊಳಗಾಗಿವೆ. ಜನತೆಗೆ ಮತ್ತೆ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಆತಂಕ ಮನೆ ಮಾಡಿದೆ.

ಬಿಹಾರದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದ್ದು, ಅಪಾಯವನ್ನು ಹೆಚ್ಚಿಸಿದೆ, ಜುಲೈ 12 ಕ್ಕೆ ಭಾರಿ ಮಳೆಯಾಗಲಿದ್ದು 'ರೆಡ್ ಅಲರ್ಟ್' ನೀಡಿದೆ. ಜುಲೈ 11 ರಂದು ಬಿಹಾರದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ.

ಮುನ್ಸೂಚನೆಯ ಪ್ರಕಾರ, ಜುಲೈ 15 ರವರೆಗೆ ಪಶ್ಚಿಮ ಬಂಗಾಳ, ಸಿಕ್ಕಿಂ, ಬಿಹಾರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಭಾರಿ ಮಳೆ ನಿರೀಕ್ಷಿಸಲಾಗಿದೆ. ಉತ್ತರಾಖಂಡ, ಮಧ್ಯ ಭಾರತ, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಪಂಜಾಬ್, ಹರಿಯಾಣ, ಚಂಡೀಗಢ, ದೆಹಲಿ ಮತ್ತು ರಾಜಸ್ಥಾನದಲ್ಲಿ ಮಳೆಯಾಗುವ ಸಾಧ್ಯತೆ ಇದೆ.

ಹಿಮಾಚಲ ಪ್ರದೇಶದ ಹಲವಾರು ಪ್ರದೇಶಗಳಲ್ಲಿ ಮಳೆ ಮುಂದುವರಿದಿದ್ದು, ಇದರ ಪರಿಣಾಮವಾಗಿ 28 ರಸ್ತೆಗಳನ್ನು ಮುಚ್ಚಲಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಗಾಳಿ, ಮಿಂಚು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇದರ ನಡುವೆ ಜು.10 ಮತ್ತು 11ರಂದು ಅಸ್ಸಾಂನಲ್ಲಿ ಮಳೆಗೆ ಮತ್ತೆ ಐವರು ಮೃತಪಟ್ಟಿದ್ದಾರೆ. ಈ ರಾಜ್ಯದಲ್ಲಿ ಪ್ರವಾಹ ಸಂಬಂಧಿತ ಸಾವಿನ ಸಂಖ್ಯೆ 84ಕ್ಕೆ ಏರಿದೆ. 27 ಜಿಲ್ಲೆಗಳಲ್ಲಿ ಸುಮಾರು 14.39 ಲಕ್ಷ ಜನರು ಪ್ರವಾಹಕ್ಕೆ ಸಿಲುಕಿದ್ದಾರೆ. ನೇಮತಿಘಾಟ್, ತೇಜ್‌ಪುರ, ಗುವಾಹಟಿ ಮತ್ತು ಧುಬ್ರಿಯಲ್ಲಿ ಬ್ರಹ್ಮಪುತ್ರ ನದಿಯಲ್ಲಿ ನೀರಿನ ಹರಿವು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net