

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ
ಮೇ 30ರಂದು ರಾತ್ರಿ ಸುರಿದ ಭಾರಿ ಮಳೆಗೆ ನೀರಕಟ್ಟೆಯಲ್ಲಿ ಮನೆಗಪ್ಪಳಿಸಿದ ಗುಡ್ಡದಿಂದ ಮನೆಯ ಯಜಮಾನ ಮಣ್ಣಿನಡಿ ಸಿಲುಕಿಯೂ ಸಾಕು ನಾಯಿಯ ಸಮಯಪ್ರಜ್ಞೆಯಿಂದ ಪವಾಡ ಸದೃಶ್ಯ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಿಶೋರ್ ನೀರಕಟ್ಟೆ ಉಪ್ಪಿನಂಗಡಿಯ ಟೀಮ್ ದಕ್ಷಿಣ ಕಾಶಿ ಸಂಟನೆಯ ಆಂಬುಲೆನ್ಸ್ ಚಾಲಕ. ಮೇ 30ರಂದು ಕರ್ತವ್ಯ ಮುಗಿಸಿ ರಾತ್ರಿ 11 ಗಂಟೆ ಸುಮಾರಿಗೆ ಮನೆ ತಲುಪಿದ ಅವರು, ಮಳೆಯಿಂದಾಗಿ ಏನಾದರೂ ಹಾನಿಯಾಗಿದೆಯಾ ಎಂದು ಟಾರ್ಚ್ ಬೆಳಕಿನಲ್ಲಿ ಪರಿಶೀಲಿಸುತ್ತಿದ್ದರು. ಆ ವೇಳೆ ಅವರ ಮನೆ ನಾಯಿ ಪ್ಯಾಂಟನ್ನು ಕಚ್ಚಿ ಹಿಂದಕ್ಕೆ ಎಳೆಯತೊಡಗಿತು. ಹಸಿವೆಯಿಂದ ನಾಯಿ ಈ ರೀತಿ ಮಾಡುತ್ತಿದೆ ಎಂದು ಭಾವಿಸಿ ನಾಯಿಯನ್ನು ದೂರಕ್ಕೆ ತಳ್ಳುತ್ತಾರೆ. ಆದರೆ ನಾಯಿ ವಿಕಾರವಾಗಿ ಕಿರುಚಾಟ ನಡೆಸಿ ಅಂಗಳದಲ್ಲಿ ಮಲಗಿ ರೋದಿಸತೊಡಗಿದಾಗ ನಾಯಿಯತ್ತ ನಾಲ್ಕು ಹೆಜ್ಜೆ ಇರಿಸುತ್ತಾರೆ. ಆ ವೇಳೆ ಗುಡ್ಡದ ಮಣ್ಣು ಜರಿದು ಇವರಿದ್ದ ಸ್ಥಳಕ್ಕೆ ಅಪ್ಪಳಿಸುತ್ತದೆ. ಅವರ ದೇಹದ ಅರ್ಧ ಭಾಗ ಮಣ್ಣಿನಡಿ ಸಿಲುಕಿದ್ದು, ಬಳಿಕ ಕೈಯಲ್ಲಿದ್ದ ಮೊಬೈಲ್ ಸಹಾಯದಿಂದ ಪತ್ನಿಗೆ ಫೋನಾಯಿಸಿ ವಿಷಯ ತಿಳಿಸುತ್ತಾರೆ. ತವರು ಮನೆಯಲ್ಲಿದ್ದ ಪತ್ನಿ ಗಂಡನ ಗೆಳೆಯರನ್ನು ಫೋನಾಯಿಸಿ ಸಹಾಯ ಯಾಚಿಸುತ್ತಾರೆ. ತಕ್ಷಣವೇ ದೌಡಾಯಿಸಿ ಬಂದ ಗೆಳೆಯರು ಕಿಶೋರ್ ಅವರನ್ನು ಮಣ್ಣಿನ ರಾಶಿಯಿಂದ ಹೊರಗೆಳೆದು ರಕ್ಷಿಸುತ್ತಾರೆ.
ನಾಯಿಗೆ ತಿಳಿಯಿತೇ ಮುನ್ಸೂಚನೆ!
ಪ್ರಾಕೃತಿಕ ವಿಕೋಪದ ಬಗ್ಗೆ ತಿಳಿದು ನಾಯಿ ತನ್ನ ಯಜಮಾನನನ್ನು ರಕ್ಷಿಸಲು ಯತ್ನಿಸಿದ ಕಾರಣಕ್ಕೆ ನಾಲ್ಕು ಹೆಜ್ಜೆ ಹೋದರಿಂದ ನಾನು ಅರ್ಧ ಭಾಗ ಮಣ್ಣಿನಲ್ಲಿ ಸಿಲುಕುವಂತಾಯಿತು. ಮೊದಲು ನಿಂತಿದ್ದ ಸ್ಥಳದಲ್ಲೇ ನಾನು ನಿಂತಿದ್ದರೆ ನಾನು ಪೂರ್ಣವಾಗಿ ಮಣ್ಣಿನಡಿ ಸಿಲುಕುತ್ತಿದೆ. ದೇವರೆ ನನ್ನನ್ನು ನಾಯಿಯ ರೂಪದಲ್ಲಿ ರಕ್ಷಿಸಲು ಮುಂದಾದರೆಂದು ಕಿಶೋರ್ ನೀರಕಟ್ಟೆ ತಿಳಿಸಿದ್ದಾರೆ.
ಶಾಸಕರ ಮಾತಿಗೆ ಬೆಲೆ ಇಲ್ಲವೇ?
ಇತ್ತೀಚೆಗೆ ಉಪ್ಪಿನಂಗಡಿಯಲ್ಲಿ ನಡೆದ ಪ್ರಾಕೃತಿಕ ವಿಕೋಪ ಮುಂಜಾಗ್ರತಾ ಸಭೆಯಲ್ಲಿ ಮಳೆಯಿಂದಾಗಿ ಯಾವುದೇ ಹಾನಿ ಸಂಭವಿಸಿದರೂ ತಕ್ಷಣವೇ ನೀಡಬೇಕಾದ 10 ಸಾವಿರ ರೂ. ಪರಿಹಾರ ಧನವನ್ನು ವಿಳಂಬಿಸದೆ ಸಂತ್ರಸ್ತರಿಗೆ ನೀಡಬೇಕೆಂಬ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ನಿರ್ದೇಶನ ಈ ಬಾರಿಯ ಪ್ರಾಕೃತಿಕ ವಿಕೋಪದ ಸಮಯದಲ್ಲಿ ಪಾಲನೆಯಾದಂತಿಲ್ಲ. ಹಲವಾರು ಮನೆಗಳಿಗೆ ಅಪ್ಪಳಿಸಿದ ಗುಡ್ಡಗಳಿಂದ ಹರಿದು ಬಂದ ಮಣ್ಣಿನ ರಾಶಿಯನ್ನು ತೆರವುಗೊಳಿಸುವುದೇ ಸಂತ್ರಸ್ತರಿಗೆ ಸವಾಲಾಗಿದೆ.